ಹೂಳೆತ್ತದೆ ಮಳೆಗಾಲದಲ್ಲಿ ಸಮಸ್ಯೆ

gramasabhe
ಕುಚ್ಚೂರು ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ನಡೆದ ಗ್ರಾಮ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡರು.
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಸಾರ್ವಜನಿಕರು ಗ್ರಾಮಸಭೆಯಲ್ಲಿ ತೊಡಗಿಸಿಕೊಳ್ಳವುದರಿಂದ ಸರ್ಕಾರದ ಎಲ್ಲ ಯೋಜನೆ ಯಶಸ್ವಿಯಾಗಿ ಜಾರಿಗೊಳ್ಳುತ್ತದೆ ಎಂದು ಕಾರ್ಕಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ್ ಹೇಳಿದರು. ಕುಚ್ಚೂರು ಗ್ರಾಪಂ ಗ್ರಾಮಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಮಾತನಾಡಿದರು.

ಕೃಷಿಕ ಕಾಳು ಶೆಟ್ಟಿ ಮಾತನಾಡಿ, ದೇವಳಬೈಲು ಪರಿಸರದಿಂದ ಆರಂಭವಾಗಿ ಹೆಗ್ಡೆಬೆಟ್ಟು, ಚಾರ್‌ಮಕ್ಕಿ, ಬಡಾಗುಡ್ಡೆ, ಕುಡಿಬೈಲು ತೋಡುಗಳ ಹೂಳೆತ್ತುವ ಕೆಲಸ ಸೀತಾನದಿಯ ತನಕ ಮಾಡಬೇಕು. ಇದರಿಂದಾಗಿ ಮಳೆಗಾಲದಲ್ಲಿ ಸಮಸ್ಯೆ ಎದುರಾಗುತ್ತಿವೆ ಎಂದು ಹೇಳಿದರು.

ಹಾಲಿಕೊಡ್ಲು, ಸಳ್ಳೆಕಟ್ಟೆ ಸಂಪರ್ಕಿಸುವ ರಸ್ತೆ ದುರಸ್ತಿಯಾಗದೆ ಜನರಿಗೆ ನಿತ್ಯ ಸಂಕಷ್ಟ ಎದುರಿಸ್ತುತ್ತಿದ್ದಾರೆ. ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಶೀಘ್ರ ರಸ್ತೆ ಡಾಂಬರೀಕರಣ ಮಾಡಿ ಎಂದು ದೀಕ್ಷಿತ್ ನಾಯಕ್ ಆಗ್ರಹಿಸಿದರು.

ಹಣ್ಣಿನ ಗಿಡಗಳನ್ನು ಬೆಳೆಸಿ: ರೈತರ ಗದ್ದೆ, ತೋಟಗಳಿಗೆ ಕಾಡುಪ್ರಾಣಿಗಳ ಹಾವಳಿ ಇದೆ. ಅರಣ್ಯ ಇಲಾಖೆ ಸಸಿಗಳು ನೆಡುವಾಗ ಹಣ್ಣು ನೀಡುವ ಮರಗಳನ್ನು ನೀಡಬೇಕೆ ಹೊರತು, ಅಕೇಶಿಯಾ ನೆಡಬೇಡಿ ಎಂದು ಆಗ್ರಹಿಸಿದರು.

ಸ್ಥಳೀಯರಾದ ಭಾಸ್ಕರ್ ಶೆಟ್ಟಿ, ಸುಜಾತ, ಸನ್ನಿ ಜೋಸೆಫ್, ಇನ್ನಿತರರು ಸಲಹೆ ಸೂಚನೆ ನೀಡಿದರು. ಅಧ್ಯಕ್ಷೆ ಶಶಿಕಲಾ, ಪಿಡಿಒ ರಿತೇಶ್ ಪುತ್ರನ್, ಸದಸ್ಯರಾದ ಮಹೇಶ್ ಶೆಟ್ಟಿ ಕಾನ್ಬೆಟ್, ಸತೀಶ್ ಪೂಜಾರಿ, ರಾಘವೇಂದ್ರ ಪೂಜಾರಿ, ಸತೀಶ್ ನಾಯ್ಕ, ಸುಕನ್ಯ ಕೃಷ್ಣಮೂರ್ತಿ, ರೇವತಿ ಶೆಟ್ಟಿ, ಶಕುಂತಲಾ, ಸುಜಾತ ಶೆಟ್ಟಿ, ಮಾಲಿನಿ ಇದ್ದರು. ಪಿಡಿಒ ರಿತೇಶ್ ನಿರೂಪಿಸಿದರು. ಮಹೇಶ್ ಶೆಟ್ಟಿ ಬಾದ್ಲು ಸ್ವಾಗತಿಸಿದರು.

ಕೆರೆಯಲ್ಲಿ ಹೂಳು

ಕುಚ್ಚೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಸಂಪಿಗೆ ಕೆರೆಯ ಹೂಳು ತೆಗೆಯಲು ಅರಣ್ಯ ಇಲಾಖೆ ಅನುಮತಿ ನೀಡಬೇಕು. ಈ ಮೂಲಕ ಸ್ಥಳೀಯವಾಗಿ ಕುಡಿಯಲು, ಅಂತರ್ಜಲ ವೃದ್ಧಿಯಾಗಲು ಕಾರಣವಾಗುತ್ತದೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಎಂದು ಸಾರ್ವಜನಿಕರು ಆಗ್ರಹಿಸಿದರು.

ಅಪಾಯಕಾರಿ ಮರ ತೆರವುಗೊಳಿಸಿ

ಬೇಳಂಜೆಯಿಂದ ಅಲ್ಬಾಡಿ ತನಕ ಅನೇಕ ಮರಗಳು ರಸ್ತೆಯ ಮೇಲೆ ವಾಲಿಕೊಂಡಿವೆ. ಈ ವರ್ಷದ ಮಳೆಗಾಲದಲ್ಲಿ ಹತ್ತಾರು ಮರಗಳು ಧರೆಗುರುಳಿವೆ. ಚಲಿಸುವ ಬಸ್, ಸ್ಕೂಟರ್‌ನಲ್ಲಿ ಹೋಗುವಾಗ ಮರ ಬಿದ್ದು ಸಮಸ್ಯೆ ಆಗಿತ್ತು. ಶೀಘ್ರ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಗ್ರಾಮಸ್ಥರು ಸೂಚನೆ ನೀಡಿದರು.

ತ್ಯಾಜ್ಯ ಹಾಕದಂತೆ ಕ್ರಮವಹಿಸಿ

ಬಡ್ತನಬೈಲು ಸೀತಾ ನದಿ ಸೇತುವೆ ಬಳಿ ಸಾರ್ವಜನಿಕರು ತ್ಯಾಜ್ಯಗಳನ್ನು ತಂದು ಎಸೆಯುತ್ತಿದ್ದಾರೆ. ಪ್ರತಿ ಗ್ರಾಮಸಭೆಯಲ್ಲಿ ಇದರ ಪ್ರಸ್ತಾವನೆ ನಡೆದರೂ ಯಾವುದೇ ಕ್ರಮವಾಗಿಲ್ಲ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಭಾಸ್ಕರ ಶೆಟ್ಟಿ ಆಗ್ರಹಿಸಿದರು.

ಕಸ್ತೂರಿರಂಗನ್ ಯೋಜನೆ ಬಗ್ಗೆ ಅಧಿಕಾರಿಗಳು ಜನರಿಗೆ ಸೂಕ್ತ ಮಾಹಿತಿ ನೀಡಬೇಕು. ಈಗಾಗಲೇ ತೆರವುಗೊಳಿಸುವ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಇದರಿಂದ ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವವರಿಗೆ ತೊಂದರೆ ಆಗಿದೆ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಆಗಬಾರದು ಎಂದರು. -ಮಹೇಶ್ ಶೆಟ್ಟಿ ಗ್ರಾಪಂ ಉಪಾಧ್ಯಕ್ಷ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಹೊತ್ತಿನಲ್ಲಿ ಸೇವೆ ಆರಂಭವಾಗಿದೆ. ಡಯಾಲಿಸಿಸ್ ಘಟಕ ಆರಂಭಗೊಂಡು ಎಪಿಎಲ್, ಬಿಪಿಎಲ್ ಭೇದ-ಭಾವವಿಲ್ಲದೆ ಎಲ್ಲರಿಗೂ ಉಚಿತ ಸೇವೆ ಸಿಗುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. -ಡಾ.ಸಂತೋಷ್ ಕುಮಾರ್ ಬೈಲೂರು, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ https://www.vijayavani.net/educational-exhibition https://www.vijayavani.net/talent-award-program-2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net