

ಹುಬ್ಬಳ್ಳಿ: ತೆರಿಗೆ ವಸೂಲಿ ಮಾಡುವಲ್ಲಿ ತೆರಿಗೆ ಸಲಹೆಗಾರರ ಪಾತ್ರ ಬಹಳ ಮಹತ್ವದ್ದಾಗಿದ್ದು, ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಾರೆ. ಈ ವೃತ್ತಿಯಲ್ಲಿ ಎಡವದೇ ಸಮರ್ಪಕ ಹಾಗೂ ಸರಿಯಾಗಿ ಕರ್ತವ್ಯ ನಿರ್ವಹಿಸಿ ದೇಶದ ಏಳ್ಗೆಗೆ ಕೈಜೋಡಿಸಬೇಕೆಂದು ಪಾವಗಡ ಶಾಸಕ ಎಚ್.ವಿ. ವೆಂಕಟೇಶ ಹೇಳಿದರು.
ನಗರದ ಕೊಪ್ಪಿಕರ ರಸ್ತೆ ಸೆಟಲೈಟ್ ಕಾಂಪ್ಲೆಕ್ಸನಲ್ಲಿ ಭಾನುವಾರ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ (ಕೆಎಸ್ ಟಿಪಿಎ) ಹಾಗೂ ಧಾರವಾಡ ಜಿಲ್ಲಾ ಸಂಘದ ಸಹಯೋಗದಲ್ಲಿ ನಿರ್ಮಿಸಿದ ಹೊಂಬಳ ಭವನ ಉದ್ಘಾಟನೆ ಸಮಾರಂಭದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ವ್ಯಾಪಾರ, ವಾಣಿಜ್ಯ ಚಟುವಟಿಕೆ ನಡೆಸುವವರು ಮಾತ್ರವಲ್ಲ, ಎಲ್ಲ ಬಗೆಯ ತೆರಿಗೆದಾತರಿಗೆ ಇನ್ಕಂ ಟ್ಯಾಕ್ಸ್ ಪಾವತಿಗೆ ಅಗತ್ಯ ಮಾಹಿತಿ ನೀಡುವುದು, ಸಕಾಲಕ್ಕೆ ತೆರಿಗೆ ಪಾವತಿಸಿ ಅನಗತ್ಯ ತೊಂದರೆಗಳಿಂದ ಗ್ರಾಹಕರನ್ನು ಮುಕ್ತಗೊಳಿಸಲು ಸಲಹೆಗಾರರು ಪ್ರಯತ್ನ ಮಾಡುತ್ತಾರೆ. ಈ ವಿಚಾರದಲ್ಲಿ ಯಾವುದೇ ಲೋಪವಾಗದಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಗ್ರಾಹಕರು ಹಾಗೂ ತೆರಿಗೆ ಇಲಾಖೆ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುವ ಸಲಹೆಗಾರರು, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸುತ್ತ ಬಂದಿದ್ದಾರೆ. ಪ್ರಧಾನಿ ಮೋದಿ ಅವರ ಒನ್ ನೇಷನ್ ಒನ್ ಟ್ಯಾಕ್ಸ್ ಯೋಜನೆಯಿಂದ ಅನೇಕ ಬದಲಾವಣೆಗಳು ಆಗಿವೆ. ತೆರಿಗೆ ಪದ್ಧತಿಯಲ್ಲಿನ ಗೊಂದಲಗಳ ನಿವಾರಣೆಗೂ ಕ್ರಮ ಕೈಗೊಳ್ಳಲಾಗಿದ್ದು, ಹಂತಹಂತವಾಗಿ ಪರಿಹಾರ ಸಿಗಲಿದೆ ಎಂದರು.
ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳು ಕೈಗೊಳ್ಳುವ ನಿರ್ಧಾರದಿಂದ ಭಾರತದ ಮೇಲೆ ತಾತ್ಕಾಲಿಕ ಪರಿಣಾಮ ಬೀರಿದರೂ ಎಂತಹದೇ ಸವಾಲನ್ನು ಎದುರಿಸಿ ಎದ್ದು ನಿಲ್ಲುವ ಶಕ್ತಿ ದೇಶಕ್ಕೆ ಇದೆ ಎಂಬುದನ್ನು ಸಾಬೀತು ಪಡಿಸುತ್ತ ಬಂದಿದೆ ಎಂದರು.
ಅಖಿಲ ಭಾರತ ತೆರಿಗೆ ಸಲಹೆಗಾರರ ಒಕ್ಕೂಟದ ಉಪಾಧ್ಯಕ್ಷ ಸಿಎ ಎಸ್. ವೆಂಕಟರಮಣಿ ಮಾತನಾಡಿದರು.
ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಸ್. ಮಿರ್ಜಾ ಅಜ್ಮತ್ ಅವರು ಮಾತನಾಡಿ, ತೆರಿಗೆದಾರರು ಹಾಗೂ ಇಲಾಖೆ ಮಧ್ಯೆ ಸೇತುವೆಯಾಗಿ ಕೆಲಸ ಮಾಡುವ ಸಲಹೆಗಾರರಿಗೆ ತರಬೇತಿ ನೀಡಲು ಇಲಾಖೆಯಿಂದಲೂ ಸಹಕಾರ ನೀಡಲಾಗುವುದು. ಸಂಪನ್ಮೂಲ ವ್ಯಕ್ತಿಗಳನ್ನು ಕಳುಹಿಸಿ ಮಾರ್ಗದರ್ಶನ ನೀಡಲಾಗುವುದು ಎಂದರು.
ಸಲಹೆಗಾರರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಯಾವುದೇ ತಪ್ಪು ಮಾಹಿತಿ ಗ್ರಾಹಕರಿಗೆ ನೀಡಬಾರದು. ತಮ್ಮಲ್ಲಿರುವ ಜ್ಞಾನವನ್ನು ಅಪ್ ಡೇಟ್ ಮಾಡಿಕೊಂಡು ಪರಿಣತಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಕೆಎಸ್ ಟಿಪಿಎ ಅಧ್ಯಕ್ಷ ಎಸ್. ನಂಜುಂಡ ಪ್ರಸಾದ ಪ್ರಾಸ್ತಾವಿಕ ಮಾತನಾಡಿ, 50 ವರ್ಷ ಪೂರೈಸಿದ ಸಂಕ್ಕೆ ನೆಲೆ ಇರಲಿಲ್ಲ. ಇದೀಗ ರಾಜ್ಯದ ಎಲ್ಲ ಸದಸ್ಯರ ಸಹಕಾರದೊಂದಿಗೆ ಭವನ ನಿರ್ಮಿಸಲಾಗಿದೆ. ಇಲ್ಲಿಂದ ವಿವಿಧ ಕಾರ್ಯಚಟುವಟಿಕೆಗಳು ಮುಂದುವರಿಯಲಿವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ರಾಜೇಶ ಜಂಬಗಿ, ಆರ್.ಬಿ. ಈರಪಣ್ಣವರ, ಮುಕುಂದ ಪೋತ್ನಿಸ್, ರವೀಂದ್ರ ಶೆಟ್ಟಿ, ಆರ್.ವಿ. ಹುಬ್ಳಿಕರ, ಶಿವರಾಮ ಹೆಗಡೆ, ಲಕ್ಷ್ಮಿ ನಾರಾಯಣ, ಸೋಮು, ಎಫ್.ಎ. ಅಕ್ಕಿ, ಆರ್.ಜಿ. ಖೋತ, ಡಿ.ಎಂ. ಭತ್ತದ, ಇತರರು ಪಾಲ್ಗೊಂಡಿದ್ದರು.
ಕೆಎಸ್ಟಿಪಿಎ ಉಪಾಧ್ಯಕ್ಷ ಅರವಿಂದ ಲಿಂಬಿಕಾಯಿ ಸ್ವಾಗತಿಸಿದರು.