

ಕಾಸರಗೋಡು: ಚಂದ್ರಗಿರಿ ಜಂಕ್ಷನ್‌ನಿಂದ ಕೆಎಸ್‌ಟಿಪಿ ರಸ್ತೆಯಲ್ಲಿ ಕೊನೆಗೂ ದುರಸ್ತಿ ಕಾರ್ಯ ಆರಂಭಿಸಲಾಗಿದೆ. ಬೃಹತ್ ಹೊಂಡಗಳಾಗಿ ವಾಹನ ಚಾಲಕರು ಮತ್ತು ಪ್ರಯಾಣಿಕರ ಪಾಲಿಗೆ ಕಂಟಕವಾಗಿದ್ದ ರಸ್ತೆಯನ್ನು ದುರಸ್ತಿ ನಡೆಸುವಂತೆ ಮಾಡಿಕೊಂಡ ಮನವಿಗೆ ಕೊನೆಗೂ ಇಲಾಖೆ ಸ್ಪಂದಿಸಿದ್ದು, ರಸ್ತೆ ಮುಚ್ಚಿ ಕಾಮಗಾರಿ ಆರಂಭಿಸಲಾಗಿದೆ.
ಎರಡು ತಿಂಗಳ ಹಿಂದೆಯಷ್ಟೆ ವಿದ್ಯಾರ್ಥಿಗಳಿಬ್ಬರು ಸಂಚರಿಸುತ್ತಿದ್ದ ಬೈಕ್ ರಸ್ತೆ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟು, ಈಕೆ ಸ್ನೇಹಿತ ಗಂಭೀರ ಗಾಯಗೊಂಡ ಘಟನೆ ನಡೆದಿತ್ತು. ಘಟನೆಯ ನಂತರ ಅಧಿಕಾರಿಗಳು ಎಚ್ಚೆತ್ತು ಹೊಂಡಗಳಿಗೆ ತೇಪೆ ಹಾಕುವ ಕಾರ್ಯ ನಡೆಸಿದ್ದರೂ, ಮಳೆಗಾಲ ಆರಂಭಗೊಂಡು ತಿಂಗಳು ದಾಟುತ್ತಿದಂತೆ ಮತ್ತೆ ಬೃಹತ್ ಹೊಂಡಗಳು ಕಾಣಿಸಿಕೊಂಡಿದ್ದವು. ವಾಹನ ಸಂಚಾರ ದುಸ್ತರವಾಗುತ್ತಿರುವ ಬಗ್ಗೆ ’ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಅವೈಜ್ಞಾನಿಕ ಮತ್ತು ಸಮರ್ಪಕವಲ್ಲದ ರೀತಿಯಲ್ಲಿ ಡಾಂಬರೀಕರಣ ಹಾಗೂ ಇಂಟರ್‌ಲಾಕ್ ಅಳವಡಿಸುವುದರಿಂದ ರಸ್ತೆಗಳು ಬೇಗನೆ ಹಾಳಾಗುತ್ತಿವೆ. ಪ್ರಸಕ್ತ ಹಳೇ ಡಾಂಬರೀಕರಣ ಸಂಪೂರ್ಣ ಅಗೆದು ತೆಗೆದು, ಕಾಂಕ್ರೀಟ್ ಮಿಶ್ರಣ ತುಂಬಿಸಿ, ಇಂಟರ್‌ಲಾಕ್ ಹಾಗೂ ಕಾಂಕ್ರೀಟೀಕರಣ ನಡೆಸುವ ಕಾಮಗಾರಿ ನಡೆಯುತ್ತಿದೆ. ದುರಸ್ತಿ ಕಾಮಗಾರಿಗಾಗಿ ಪ್ರೆಸ್‌ಕ್ಲಬ್ ಜಂಕ್ಷನ್‌ನಿಂದ ಚಂದ್ರಗಿರಿ ಸೇತುವೆ ವರೆಗೆ ವಾಹನ ಸಂಚಾರವನ್ನು ಸೆ.28ರವರೆಗೆ ಮುಚ್ಚಲಾಗಿದೆ. ಇದರಿಂದ ಸೇತುವೆ ವರೆಗೆ ಮಾತ್ರ ಬಸ್ ಸೇವೆ ನಡೆಸುತ್ತಿದ್ದು, ಅಲ್ಲಿಂದ ಪ್ರಯಾಣಿಕರು ಕಾಲ್ನಡಿಗೆ ಮೂಲಕ ತಲುಪಬೇಕಾಗಿದೆ.