ಹುಬ್ಬಳ್ಳಿ: ತಾಲೂಕಿನ ಬುಡರಸಿಂಗಿಯ ಕರ್ನಾಟಕ ಶಿಕ್ಷಣ ಸೇವಾ ಸಮಿತಿಯ ಕೆ.ಎಸ್.ಎಸ್.ಎಸ್. ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮದ ಪ್ರಯುಕ್ತ ಗೋವರ್ಧನ ಉತ್ಸವ ಮಕ್ಕಳ ಹಬ್ಬ ಆಚರಿಸಲಾಯಿತು.
ಅತಿಥಿಗಳಾಗಿದ್ದ ಪಂ. ಗೋಪಿನಾಥಾಚಾರ್ಯ ಗಲಗಲಿ ಮಾತನಾಡಿ, ಕೃಷ್ಣನ ಮುಖಗಳನ್ನು ನೋಡುತ್ತ ಹೋದರೆ ಸಂಗೀತದ ಕೃಷ್ಣ, ನರ್ತನದ ಕೃಷ್ಣ, ಗೀತೋಪದೇಶದ ಕೃಷ್ಣ, ಜ್ಞಾನದ ಕೃಷ್ಣ ಮುಂತಾದ ರೂಪಗಳನ್ನು ಕಾಣಬಹುದು. ಕೃಷ್ಣನನ್ನು ಗುಣಸಮುದ್ರ ಎಂದು ಹೇಳಬಹುದು. ಜೀವನದಲ್ಲಿ ಭಗವಂತನಲ್ಲಿ ಏನನ್ನಾದರೂ ಕೇಳಬೇಕೆಂದರೆ ಜ್ಞಾನವನ್ನು ಕೇಳಬೇಕು. ಇದು ಯಾರೂ ಕದಿಯದ ಸಂಪತ್ತು ಎಂದರು.
ಗೌರವ ಕಾರ್ಯದರ್ಶಿ ಡಾ. ಸತ್ಯಮೂರ್ತಿ ಆಚಾರ್ಯ ಮಾತನಾಡಿ, ಕೃಷ್ಣನ ಬಗ್ಗೆ ಅಪನಂಬಿಕೆ ಇಟ್ಟರೆ ಯಾವ ಲಾಭವೂ ಇಲ್ಲ. ವಿಶ್ವಾಸವಿದ್ದರೆ ಮಾತ್ರ ಎಲ್ಲವೂ ದೊರೆಯಲಿದೆ ಎಂದರು.
ಗೌರವ ಕಾರ್ಯಾಧ್ಯಕ್ಷ ಶ್ರೀಕಾಂತ ಕೆಮ್ತೂರ್, ಕಾಲೇಜಿನ ಜಂಟಿ ಕಾರ್ಯದರ್ಶಿ ಗೋಪಾಲ ಕುಲಕರ್ಣಿ ಮಾತನಾಡಿದರು.
ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಂಗೋಲಿ, ಚಿತ್ರಲೇಖನ, ಮೊಸರು ಗಡಿಗೆ ಒಡೆಯುವ ಸ್ಪರ್ಧೆ, ಕಸದಿಂದ ರಸ ತೆಗೆಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನಲ್ಲಿ ವ್ಯಾಸಂಗ ಮಾಡಿ ವೈದ್ಯರಾಗಿರುವ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ಸದಸ್ಯರಾದ ಶ್ರೀಪತಿ ಐತಾಳ, ವಿ.ಜಿ. ನಾಡಗೌಡ, ಎ.ಕೆ. ಕೃಷ್ಣರಾವ್ ಹಾಗೂ ಪ್ರಾಚಾರ್ಯ ಮಹೇಂದ್ರ ಜಿ.ಎ. ಹಾಗೂ ಅಧ್ಯಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.