ಬದುಕಿಗೆ ಶೈಕ್ಷಣಿಕ ಜ್ಞಾನ ಅಗತ್ಯ : ಡಾ.ನರೇಂದ್ರ ರೈ ದೇರ್ಲ ಅನಿಸಿಕೆ

college annual day
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ, ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ ಮತ್ತಿತರರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಸಂಪತ್ತು ನಶ್ವರ, ಜ್ಞಾನ ಶಾಶ್ವತ. ಯುವ ಮನದಲ್ಲಿ ಬದುಕಿಗೆ ಬೇಕಾದ ಶೈಕ್ಷಣಿಕ ಜ್ಞಾನ ಬಿತ್ತುವ ಶ್ರೇಷ್ಠ ಕಾರ್ಯ ನಡೆಯಬೇಕಿದೆ. ಆಧುನಿಕ ಶಿಕ್ಷಣವು ಯಂತ್ರ ಕೇಂದ್ರಿತವಾಗುತ್ತಿದೆ ಎಂದು ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಹೇಳಿದರು.
ಮಂಗಳವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಬಳಿಕ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪದನಿಮಿತ್ತ ಕಾರ್ಯದರ್ಶಿ ಹಾಗೂ ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ ಅಧ್ಯಕ್ಷತೆ ವಹಿಸಿದ್ದರು. ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕಿ ಲತಾ ಬಿ.ಟಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಆನಂದ ಎಚ್.ಟಿ, ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್‌ಪ್ರಸಾದ್ ಎನ್, ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಸುಹಾಸ್ ಎಂ.ಜಿ, ಉಪಾಧ್ಯಕ್ಷೆ ಪೂಜಾ, ಕಾರ್ಯದರ್ಶಿ ಕೌಶಿಕ್ ಉಪಸ್ಥಿತರಿದ್ದರು.

ಆನ್‌ಲೈನ್ ಶಿಕ್ಷಣದ ಜತೆ ಟಿವಿ ಮತ್ತು ಮೊಬೈಲ್‌ಗಳ ದಾಸರಾಗಿ ವಿದ್ಯಾರ್ಥಿಗಳು ಯಾಂತ್ರಿಕ ಜ್ಞಾನ ಪಡೆಯುತ್ತಿದ್ದಾರೆ. ಮಾನವೀಯ ಮೌಲ್ಯಗಳನ್ನು ಒಳಗೊಂಡ ಶ್ರೇಷ್ಠ ಶಿಕ್ಷಣ ಯುವ ಜನಾಂಗದ ಬದುಕಿನ ಔನ್ನತ್ಯಕ್ಕೆ ಬುನಾದಿಯಾಗುತ್ತದೆ. ಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನದ ಅಭ್ಯುದಯಕ್ಕೆ ಅತ್ಯವಶ್ಯಕ.
-ಡಾ.ನರೇಂದ್ರ ರೈ ದೇರ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net