

ಹನೂರು: ತಾಲೂಕು ಕೇಂದ್ರವಾದ ಹನೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಘಟಕ ಸ್ಥಾಪನೆಗೆ ಸ್ಥಳ ಮಂಜೂರಾಗಿ ವರ್ಷ ಕಳೆದಿದೆಯಾದರೂ ಅನುದಾನ ಕೊರತೆಯಿಂದ ಈ ಕಾರ್ಯ ನನಗುದಿಗೆ ಬಿದ್ದಿದೆ. ಪರಿಣಾಮ ಈ ಭಾಗದ ಜನರಿಗೆ ಉತ್ತಮ ಸಾರಿಗೆ ಸೇವೆ ದೊರಕುತ್ತಿಲ್ಲ.
ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ಹನೂರು ಈ ಹಿಂದೆ ಕೊಳ್ಳೇಗಾಲ ತಾಲೂಕಿಗೆ ಸೇರಿತ್ತು. 2018ರ ಜ.10 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನೂರನ್ನು ಹೊಸ ತಾಲೂಕಾಗಿ ರಚನೆ ಮಾಡಿದರು. ಇದೇ ವೇಳೆ 2.66 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸಾರಿಗೆ ಬಸ್ ನಿಲ್ದಾಣವನ್ನೂ ಉದ್ಘಾಟಿಸಲಾಯಿತು. ಆದರೆ ಬಸ್ ಘಟಕ ಸ್ಥಾಪನೆ ಸಾಧ್ಯವಾಗಲಿಲ್ಲ.
ಬಹುತೇಕ ಹಳ್ಳಿಗಳಿಂದ ಕೂಡಿದ ಈ ಭಾಗದ ಜನರಿಗೆ ಉತ್ತಮ ಸಾರಿಗೆ ಸೇವೆ ಸಿಗಬೇಕು ಎನ್ನುವ ಉದ್ದೇಶದಿಂದ ತಾಲೂಕು ಕೇಂದ್ರಕ್ಕೆ ಬಸ್ ಘಟಕ ಅಗತ್ಯವೆಂದು ಮನಗಂಡ ಅಂದಿನ ಶಾಸಕ ಆರ್.ನರೇಂದ್ರ ಅವರು ಸ್ಥಳಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ದಿಸೆಯಲ್ಲಿ ಹುಲುಸುಗುಡ್ಡೆ ಬಳಿ ಕಂದಾಯ ಇಲಾಖೆ ಸರ್ವೇ ನಂಬರ್ 430ರಲ್ಲಿ 4.75 ಎಕರೆ ಸರ್ಕಾರಿ ಜಾಗವನ್ನು ಬಸ್ ಘಟಕ ಸ್ಥಾಪನೆಗೆಂದು ಜಾಗ ಗುರುತಿಸಿ ಸಾರಿಗೆ ಇಲಾಖೆಗೆ ಹಸ್ತಾಂತರಿಸಿ ವರ್ಷವೇ ಕಳೆದಿದೆ. ಆದರೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಡಿಪೋ ಸ್ಥಾಪಿಸುವ ಕಾರ್ಯ ನನೆಗುದಿಗೆ ಬಿದ್ದಿರುವುದು ನಿಜಕ್ಕೂ ವಿಪರ್ಯಾಸ.
ಘಟಕವಿಲ್ಲದೆ ಬಸ್‌ಗಳ ಸಮಸ್ಯೆ: ತಾಲೂಕಿನಲ್ಲಿ ಕಾಡಂಚಿನ ಗ್ರಾಮಗಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಗ್ರಾಮಗಳಿವೆ. ಇದರಲ್ಲಿ ಕೆಲ ಗ್ರಾಮಗಳಿಗೆ ಬಸ್ ಸೌಕರ್ಯವೇ ಇಲ್ಲ. ಇದರಿಂದ ಈ ಭಾಗದ ಜನರು ಆಟೋ, ಬೈಕ್ ಇಲ್ಲವೇ ನಡೆದು ತೆರಳಬೇಕಾದ ಸ್ಥಿತಿ ಇದೆ. ಇನ್ನು ಕೆಲವು ಗ್ರಾಮಗಳಿಗೆ ಬೆರಳೆಣಿಕೆ ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಇದರಿಂದ ಜನರು ಬಸ್‌ಗಾಗಿ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಇದೆ. ಮತ್ತೊಂದೆಡೆ ಸರ್ಕಾರ ಇತ್ತೀಚೆಗೆ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿರುವುದರಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ.
ಸಮರ್ಪಕ ಬಸ್ ಸೌಕರ್ಯ ಒದಗಿಸುವಂತೆ ಹನೂರು, ಲೊಕ್ಕನಹಳ್ಳಿ, ಶಾಗ್ಯ ಹಾಗೂ ಇತರೆ ಕಡೆಗಳಲ್ಲಿ ಬಸ್ ಸಂಚಾರ ತಡೆದು ಹಲವು ಬಾರಿ ಪ್ರತಿಭಟನೆ ನಡೆಸಿರುವ ಘಟನೆಗಳೂ ನಡೆದಿವೆ. ಜತೆಗೆ ರೈತ ಸಂಘಟನೆಗಳು ಶಾಲಾ ಮಕ್ಕಳಿಗೆ ಅಗತ್ಯಕ್ಕೆ ಅನುಗುಣವಾಗಿ ಬಸ್ ಸೌಕರ್ಯ ಒದಗಿಸುವಂತೆ ತಾಲೂಕು ಮಟ್ಟದ ಸಭೆಗಳಲ್ಲಿ ಹಲವು ಬಾರಿ ಒತ್ತಾಯಿಸಿದ್ದಾರೆ. ಆದರೆ ಬಸ್ ಘಟಕ ಇಲ್ಲದ ಪರಿಣಾಮ ಅಗತ್ಯಕ್ಕೆ ತಕ್ಕಂತೆ ಬಸ್ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಒಂದು ವೇಳೆ ಬಸ್ ಘಟಕ ಸ್ಥಾಪನೆಯಾದರೆ ಈ ಸಮಸ್ಯೆ ಬಗೆಹರಿಯಲಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ಅಗತ್ಯ ಮುತುರ್ವಜಿ ವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಜನತೆಗೆ ಸಿಗದ ಸೌಕರ್ಯ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ, ದೀಪಾವಳಿ, ಯುಗಾದಿ ಜಾತ್ರೆ ವೇಳೆ ಹಾಗೂ ಇತರ ವಿಶೇಷ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಈ ದಿಸೆಯಲ್ಲಿ ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಕೊಳ್ಳೇಗಾಲ ಸೇರಿದಂತೆ ಇತರ ಘಟಕದಿಂದ ಹೆಚ್ಚುವರಿ ಬಸ್ ಬಿಡಲಾಗುತ್ತದೆ. ಈ ವೇಳೆ ಹನೂರು ಭಾಗದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಮ.ಬೆಟ್ಟಕ್ಕೆ ತೆರಳುತ್ತಾರೆ. ಆದರೆ ಹನೂರಿನಲ್ಲಿ ಬಸ್ ಘಟಕವಿಲ್ಲದ ಪರಿಣಾಮ ಇಲ್ಲಿಂದ ಮ.ಬೆಟ್ಟಕ್ಕೆ ಪ್ರತ್ಯೇಕ ಬಸ್ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಇದರಿಂದ ಕೊಳ್ಳೇಗಾಲದ ಕಡೆಯಿಂದ ಬರುವ ಬಸ್‌ನಲ್ಲಿ ನೂಕು ನುಗ್ಗಲಿನಲ್ಲೇ ತೆರಳಬೇಕಾದ ಸ್ಥಿತಿ ಇದೆ.
ಕೊಳ್ಳೇಗಾಲ ಘಟಕದಿಂದಲೇ ಕಾರ್ಯ ನಿರ್ವಹಣೆ: ಹನೂರಿನಲ್ಲಿ ಬಸ್ ಘಟಕವಿಲ್ಲದ ಪರಿಣಾಮ ಈ ಭಾಗದ ಗ್ರಾಮಗಳಿಗೆ ಕೊಳ್ಳೇಗಾಲದ ಘಟಕದಿಂದಲೇ ಬಸ್‌ಗಳನ್ನು ಬಿಡಲಾಗುತ್ತಿದೆ. ಇಲ್ಲಿನ ಡಿಪೋ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳೇ ಈ ಭಾಗದ ಸಾರಿಗೆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ ಇವರಿಗೆ 2 ತಾಲೂಕಿನ ಕಾರ್ಯಭಾರವೂ ಹೆಚ್ಚಿದೆ. ಜತೆಗೆ ಮಾರ್ಗಮಧ್ಯದಲ್ಲಿ ಕೆಟ್ಟು ನಿಲ್ಲುವ ಬಸ್‌ಗಳನ್ನು ರಿಪೇರಿ ಪಡಿಸಬೇಕಾದರೆ ಕೊಳ್ಳೇಗಾಲ ಘಟಕದ ಸಿಬ್ಬಂದಿ ಆಗಮಿಸಬೇಕಿದೆ. ಇದರಿಂದ ಸಮಸ್ಯೆಯಾಗಿದೆ. ಹಾಗಾಗಿ ಇಷ್ಟೆಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಬೇಕಾದರೆ ಹನೂರಿನಲ್ಲಿ ಬಸ್ ಘಟಕ ಸ್ಥಾಪನೆಯಾಗಬೇಕಿರುವುದು ಅಗತ್ಯವಾಗಿದೆ.
ಸ್ಥಾಪನೆಗೆ ಒತ್ತಾಯ: ಹನೂರಿನಲ್ಲಿ ಬಸ್ ನಿಲ್ದಾಣವನ್ನು ಉದ್ಘಾಟನೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತುತವೂ ಸಿಎಂ ಆಗಿದ್ದಾರೆ. ಆದ್ದರಿಂದ ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಿ ತಾಲೂಕಿನ ಜನತೆಯ ಆಶಯಕ್ಕೆ ಅನುಗುಣವಾಗಿ ಅನುದಾನ ನೀಡುವ ಮೂಲಕ ಬಸ್ ಘಟಕ ಸ್ಥಾಪಿಸಿ ಉತ್ತಮ ಸಾರಿಗೆ ಸೇ ಒದಗಿಸಬೇಕು. ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲೂಕು ಕೇಂದ್ರವಾದ ಹನೂರಿನಲ್ಲಿ ಬಸ್ ಘಟಕ ಇಲ್ಲದರ ಪರಿಣಾಮ ಈ ಭಾಗದ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸಾರಿಗೆ ಸೇವೆ ಸಿಗುತ್ತಿಲ್ಲ. ಇನ್ನು ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಇಲ್ಲ. ಇತ್ತ ಮಾರ್ಗಮಧ್ಯೆ ಬಸ್ ಕೆಟ್ಟು ನಿಂತರೆ ರಿಪೇರಿಗಾಗಿ ಕೊಳ್ಳೇಗಾಲದ ಘಟಕದಿಂದಲೇ ಸಿಬ್ಬಂದಿ ಆಗಮಿಸಬೇಕಿದೆ. ಇದರಿಂದ ಸಮಸ್ಯೆಯಾಗಿದೆ. ಈ ಸಂಬಂಧ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಬಸ್ ಡಿಪೋ ಸ್ಥಾಪನೆಗೆ ಮುಂದಾಗಬೇಕು.
ಅಮ್ಜಾದ್‌ಖಾನ್ ಅಧ್ಯಕ್ಷ, ರೈತ ಸಂಘ ಹನೂರು
ಹನೂರಿನಲ್ಲಿ ಬಸ್ ಡಿಪೋ ಸ್ಥಾಪನೆ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇನ್ನೂ ಸಹ ಅನುಮೋದನೆ ದೊರಕಿಲ್ಲ. ಜತೆಗೆ ಅನುದಾನವೂ ಬಿಡುಗಡೆಯಾಗಿಲ್ಲ. ಈ ಬಗ್ಗೆ ಮುತುರ್ವಜಿ ವಹಿಸಲಾಗಿದ್ದು ಅಗತ್ಯ ಕ್ರಮವಹಿಸಲಾಗಿದೆ.
ಅಶೋಕ್‌ಕುಮಾರ್ ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಆರ್‌ಟಿಸಿ, ಚಾ.ನಗರ ವಿಭಾಗ