ಸಾರಿಗೆ ನೌಕರರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

udp-5-ksrtc
Published on

ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರಕ್ರಿಯೆ ವ್ಯಕ್ತವಾಗಿದ್ದು, ಹೊರ ಜಿಲ್ಲೆಗಳಿಂದ ಆಗಮಿಸುವ ಕೆಎಸ್​ಆರ್​ಟಿಸಿ ಬಸ್​ಗಳ ಸಂಖ್ಯೆ ವಿರಳವಾಗಿತ್ತು.

ಬನ್ನಂಜೆ ಕೆಎಸ್ಸಾರ್ಟಿಸಿ ಬಸ್​ ನಿಲ್ದಾಣ, ನಗರದ ನಮ್​ರ್ ಬಸ್​ ನಿಲ್ದಾಣ ಹಾಗೂ ಕುಂದಾಪುರ ಬಸ್​ ನಿಲ್ದಾಣದಿಂದ ಹೊರಡುವ ಬಸ್​ಗಳನ್ನು ಸಿಬ್ಬಂದಿ ಬೆಳಗ್ಗೆ 8 ಗಂಟೆಯವರೆಗೆ ರಸ್ತೆಗೆ ಇಳಿಸಿರಲಿಲ್ಲ. ಬಳಿಕ ಅಧಿಕಾರಿಗಳ ಸೂಚನೆಯಂತೆ ಬಸ್​ ಸಂಚಾರ ಆರಂಭಿಸಿದ್ದರು.

ಉಡುಪಿ ಕೆಎಸ್ಸಾರ್ಟಿಸಿ ಬಸ್​ ನಿಲ್ದಾಣದಿಂದ ಹೊರ ಜಿಲ್ಲೆಗೆ ಹೊರಡುವ 35 ಬಸ್​ಗಳ ಪೈಕಿ 28 ಬಸ್​ಗಳು ಪ್ರಯಾಣ ಆರಂಭಿಸಿದ್ದು, ಏಳು ಬಸ್​ಗಳು ನಿಲ್ದಾಣದಲ್ಲಿಯೇ ಬಾಕಿಯಾಗಿವೆ. ಮಧ್ಯಾಹ್ನ ಬಳಿಕ ಕೆಲವು ರೂಟ್​ ಗಳಿಗೆ ಬಸ್​ ಸಂಚಾರ ಆರಂಭವಾಗಿತ್ತು. 54 ನಮ್​ರ್ ಬಸ್​ಗಳ ಪೈಕಿ ಶೇ.70ರಷ್ಟು ಬಸ್​ ಗಳು ಜಿಲ್ಲೆಯೊಳಗಿನ ಎಂದಿನಂತೆ ಸಂಚಾರ ನಡೆಸಿವೆ. ಹೊರ ಜಿಲ್ಲೆಗೆ ಹೋಗುವ ಬಸ್​ಗಳು ಮಾತ್ರ ಸಂಚಾರ ಸ್ಥಗಿತಗೊಳಿಸಿದ್ದವು.

ಪ್ರಯಾಣಿಕರ ಪರದಾಟ

ಹೊರ ಜಿಲ್ಲೆಗಳಿಂದ ನಗರಕ್ಕೆ ಆಗಮಿಸುವ ಬಸ್​ಗಳು ನಿಲ್ದಾಣಕ್ಕೆ ಬರದೇ ಇರುವುದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಬೆಂಗಳೂರು, ಹುಬ್ಬಳ್ಳಿ, ಮುಂಬೈ ಸಹಿತ ಬೇರೆ ಪ್ರದೇಶಗಳಿಗೆ ತೆರಳುವ ಬಸ್​ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಭದ್ರತೆ ದೃಷ್ಟಿಯಿಂದ ಕುಂದಾಪುರ, ಉಡುಪಿ ನಿಲ್ದಾಣಗಳಲ್ಲಿ ಕೆಎಸ್​ಆರ್​ಪಿ, ಡಿಎಆರ್​ ತುಕಡಿಗಳನ್ನು ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net