

ಚಿಕ್ಕಬಳ್ಳಾಪುರ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದ ಪ್ರಯಾಣಿಕಳ ಬ್ಯಾಗಿನಲ್ಲಿದ್ದ ಚಿನ್ನದ ಒಡವೆಗಳನ್ನು ಕಳ್ಳರು ಲಪಟಾಯಿಸಿದ್ದಾರೆ.
ಬೆಂಗಳೂರಿನ ಗಂಗಾನಗರದ ಶಶಿಕಲಾ (40 ವರ್ಷ) ಒಡವೆಗಳನ್ನು ಕಳೆದುಕೊಂಡವರು. ಇಲ್ಲಿನ ಕಾರ್ತಿಕ್ ಜ್ಯೂಯಲರಿ ಅಂಡ್ ವರ್ಕ್ಸ್ ಅಂಗಡಿಯಲ್ಲಿ 10 ಗ್ರಾಂ ತೂಕದ ಬಂಗಾರದ 3 ಜೊತೆ ಕಿವಿ ಓಲೆ, 4 ಗ್ರಾಂ ತೂಕದ ಬಂಗಾರದ ತಾಳಿ ಹಾಗೂ 2 ಉಂಗುರಗಳನ್ನು ಖರೀದಿಸಿದ್ದು ಬಳಿಕ ಬೆಂಗಳೂರಿಗೆ ತೆರಳಲು ನಿಲ್ದಾಣದಲ್ಲಿ ಬಸ್ ಏರಿ, ಸೀಟಿನಲ್ಲಿ ಕುಳಿತುಕೊಂಡ ಸಂದರ್ಭದಲ್ಲಿ ಬ್ಯಾಗಿನ ಜಿಪ್ ತೆಗೆದಿರುವುದು ಕಾಣಿಸಿದೆ. ಇದನ್ನು ಪರಿಶೀಲಿಸಿದಾಗ ಒಡವೆಗಳು ಇರಲಿಲ್ಲ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ಚಿಕ್ಕಬಳ್ಳಾಪುರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೂಕು ನುಗ್ಗಲಾಟದ ನಡುವೆ ಬಸ್ ಏರುವ ಸಂದರ್ಭದಲ್ಲಿ ಕೊರಳಿಗೆ ಕೈ ಹಾಕಿ, ಸರವನ್ನು ಕಸಿದುಕೊಂಡ ಕಳ್ಳಿಯನ್ನು ಮಹಿಳೆಯೊಬ್ಬರು ಹಿಡಿದು ಥಳಿಸಿದ್ದರು. ಇಬ್ಬರ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು.