

ಮಂಡ್ಯ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕೆಎಸ್‌ಆರ್‌ಟಿಸಿ ಸ್ಟ್ಾ ಆ್ಯಂಡ್ ವರ್ಕರ್ ಯೂನಿಯನ್ ಆಶ್ರಯದಲ್ಲಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಿಗಮದ ವಿಭಾಗಿಯ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. 2020 ರಿಂದ 2023ರ ವರೆಗಿನ ಶೇ.15ರಷ್ಟು ವೇತನ ಹೆಚ್ಚಳದ ಬಾಕಿ ಹಣ ಪಾವತಿ ಮಾಡಬೇಕಾಗಿದೆ. ಈ ಕುರಿತು ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ವರ್ಗಕ್ಕೆ ಮನವಿ ಮಾಡಿದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ. 2024 ಜನವರಿ ಆರಂಭದ ದಿನದಿಂದ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಹೊಸ ವೇತನ ಪರಿಷ್ಕರಣೆ ಮಾಡಬೇಕಿದೆ. ಆದರೆ ಸಾರಿಗೆ ನೌಕರರನ್ನು ದಿಕ್ಕು ತಪ್ಪಿಸಿ ಇನ್ನಿಲ್ಲದ ಸಂಕಷ್ಟಗಳಿಗೆ ಗುರಿ ಮಾಡಿದ ಶಕ್ತಿಗಳು ಮತ್ತೆ ತಮ್ಮ ಹಳೆಯ ಚಾಳಿಯನ್ನು ಆರಂಭ ಮಾಡಿದ್ದು, ಇದರ ಬಗ್ಗೆ ಕ್ರಮ ವಹಿಸಬೇಕಾಗಿದೆ. ಅದೇ ರೀತಿ ಕೇಂದ್ರ ಸರ್ಕಾರ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಚಾಲಕರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರೂಪಿಸಿರುವುದು ಚಾಲಕ ವರ್ಗಕ್ಕೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2020 ಜನವರಿ ಯಿಂದ ಬಾಕಿ ಇರುವ 38 ತಿಂಗಳ ವೇತನ ಪಾವತಿಸಬೇಕು. 2020 ರಿಂದ 2023ರ ವರೆಗೆ ನಿವೃತ್ತರಾದ ನೌಕರರಿಗೆ ವೇತನ ಪರಿಷ್ಕರಣೆ ಅಳವಡಿಸಿ ನಿವೃತ್ತಿ ಸೌಲಭ್ಯಗಳ ಬಾಕಿ ಹಣ ನೀಡಬೇಕು. ನೌಕರರ ವೇತನ ಪರಿಸ್ಕರಣೆಗೆ ಮುಂದಾಗಬೇಕು. ನೌಕರ ಸಮೂಹಕ್ಕೆ ಅಧಿಕಾರಿಗಳ ಕಿರುಕುಳ ತಪ್ಪಿಸಬೇಕು. ಚಾಲಕರಿಗೆ ಮಾರಕವಾಗಿರುವ ಕಾನೂನು ತಿದ್ದುಪಡಿಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯೂನಿಯನ್ ಅಧ್ಯಕ್ಷ ಮಲ್ಲೇಶ, ಪ್ರಧಾನ ಕಾರ್ಯದರ್ಶಿ ಡಿ.ಜಿ.ಪುಟ್ಟರಾಜು, ರಸ್ತೆ ಸಾರಿಗೆ ನೌಕರರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಎಂ.ಎಚ್.ಸುಧೀರ್ ಇತರರಿದ್ದರು.