ಉಪಾಹಾರಗೃಹ ಸ್ವಾವಲಂಬನೆಗೆ ಯೋಜನೆ ರೂಪಿಸಿ : ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಸಲಹೆ

15-klr-3
Published on

ಕೋಲಾರ : ಉಪಾಹಾರ ಗೃಹ ಸ್ವಾವಲಂಬಿಯಾಗಿ ಮುಂದುವರಿಯಲು ಕೈಗಾರಿಕೆಗಳಿಗೆ ಇಲ್ಲಿಂದಲೇ ಆಹಾರ ಪೊಟ್ಟಣ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್ ಚಂದ್ರಶೇಖರ್ ಸಲಹೆ ನೀಡಿದರು.

ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಆವರಣದಲ್ಲಿ ಸಾರಿಗೆ ನೌಕರರ ಬಳಕೆದಾರರ ಮತ್ತು ಉಪಹಾರ ಗೃಹ ಸಹಕಾರ ಸಂಘ ನಿಯಮಿತದ ಸಂಘದ 2019-2020ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಕೆಲವೇ ಕೆಲವು ವಿಭಾಗಗಳಲ್ಲಿ ಮಾತ್ರ ಕ್ಯಾಂಟೀನ್ ವ್ಯವಸ್ಥೆಯಿದೆ. ಇಲ್ಲಿನ ಉಪಾಹಾರ ಗೃಹದಲ್ಲೂ ಗುಣಮಟ್ಟದ ಆಹಾರ ಸಿದ್ಧಪಡಿಸಿ ಉಣಬಡಿಸಲಾಗುತ್ತಿದೆ ಎಂದರು.

ಕರೊನಾ ಹಾವಳಿಯಲ್ಲೂ ಸಂಘ 5 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಹಲವು ಕೈಗಾರಿಕೆಗಳಿವೆ. ಇಲ್ಲಿನ ಕಾರ್ಮಿಕರಿಗೆ ಉಪಾಹಾರ ಪೊಟ್ಟಣ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಸಂಘ ಸ್ವಾವಲಂಬಿಯಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು.

ಕರೊನಾ ಸಂದರ್ಭದಲ್ಲಿ ಪರಿಸ್ಥಿತಿ ಬದಲಾಗುತ್ತಿದೆ. ನೌಕರರ ಪಾಲಿಗೆ ಸಹಕಾರ ಸಂಘಗಳು ಸಹಕಾರಿ ಎಂಬುದು ಮನವರಿಕೆಯಾಗಿದೆ. ಲಾಕ್‌ಡೌನ್ ವೇಳೆ ನೌಕರರಿಗೆ ಸರಿಯಾಗಿ ವೇತನ ಸಿಗಲಿಲ್ಲ. ಬಳಕೆದಾರರ ಸಂಘದ ಮೂಲಕ ಸಾಲದ ರೂಪದಲ್ಲಿ ಕೊಟ್ಟ ಸಾಮಗ್ರಿ ಜೀವನ ನಿರ್ವಹಣೆಗೆ ನೆರವಾಗಿದೆ. ಅಗಿರುವ ನಷ್ಟ ಸರಿದೂಗಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.

ನೌಕರರ ಬಳಕೆದಾರರ ಸಂಘದ ಅಧ್ಯಕ್ಷ ಸಿ. ಗೋಪಾಲಗೌಡ ಮಾತನಾಡಿ, ಸಹಕಾರ ಸಂಘ ಕಳೆದ ವರ್ಷಕ್ಕಿಂತ 5,82,816 ಲಕ್ಷ ರೂ. ಲಾಭಗಳಿಸಿದೆ. ಮುಂದಿನ ವರ್ಷದಿಂದ ಆಹಾರ ಸಾಮಗ್ರಿಗಳ ಜತೆಗೆ ಗೃಹೋಪಯೋಗಿ ಉಪಕರಣ ಕಲ್ಪಿಸಲು ಗುರಿ ಹೊಂದಲಾಗಿದೆ. ನೌಕರರ ಯೋಗಕ್ಷೇಮದೊಂದಿಗೆ ಉತ್ತಮ ಜೀವನ ರೂಪಿಸಲು ಸಂಘವು ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದರು.

ಸಾರಿಗೆ ಸಂಸ್ಥೆಯ ವಿಭಾಗೀಯ ಯಾಂತ್ರಿಕ ಅಭಿಯಂತ ಬಿ.ಎಂ ಸತೀಶ್, ಆಡಳಿತಾಧಿಕಾರಿ ಗುರುಶಾಂತ್, ಅಂಕಿ-ಅಂಶಗಳ ಅಧಿಕಾರಿ ಸೌಮ್ಯಾ, ಬಳಕೆದಾರರ ಸಂಘದ ಖಜಾಂಚಿ ಟಿ.ಎಂ ವೆಂಕಟೇಶ್, ಉಪಾಹಾರ ಗೃಹ ಸಂಘದ ಅಧ್ಯಕ್ಷ ಎಚ್.ಆರ್ ಚೌಡಪ್ಪ, ಉಪಾಧ್ಯಕ್ಷ ವಿ.ಕೃಷ್ಣಪ್ಪ, ಗೌರವ ಕಾರ್ಯದರ್ಶಿ ಕೆ.ನಾಗರಾಜ್, ಖಜಾಂಚಿ ಇ.ವಿನುತಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net