ಸೇತುವೆಯಿಂದ ನದಿಗೆ ಹಾರಿ ಕೆಎಸ್ಸಾರ್ಟಿಸಿ ಚಾಲಕ ಆತ್ಮಹತ್ಯೆ

sucide
Published on

ಉಳ್ಳಾಲ/ಬಂಟ್ವಾಳ ಆತ್ಮಹತ್ಯೆಗೆ ಕಡಿವಾಣ ಹಾಕಲು ನೇತ್ರಾವತಿ ನದಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಡೆಬೇಲಿ ಹಾಕಿದ ಕಾರಣ ಬುಧವಾರ ಸಂಜೆ ಕೆಎಸ್ಸಾರ್ಟಿಸಿ ಚಾಲಕರೋರ್ವರು ರೈಲ್ವೇ ಹಳಿ ಮೇಲೆ ಹೋಗಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಡಿಪೋ ಭದ್ರತಾ ವಿಭಾಗದಲ್ಲಿದ್ದ ಉಪ್ಪಿನಂಗಡಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಆತೂರು ನಿವಾಸಿ ಬಾಲಕೃಷ್ಣ (50)ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ನೀರಿಗೆ ಬೀಳುವ ಮೊದಲೇ ಅವರು ಮೃತಪಟ್ಟಿದ್ದರಿಂದ ದೇಹ ನೀರಿನಲ್ಲಿ ತೇಲುತ್ತಾ ತಡೆಬೇಲಿ ಇರುವ ಸೇತುವೆ ಅಡಿಭಾಗದಿಂದ ಹಾದು ಕುದುರುವಿನತ್ತ ಸಾಗಿದೆ. ಈ ಸಂದರ್ಭ ಸೇತುವೆಯಲ್ಲಿ ಜನಜಮಾಯಿಸಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಪೊಲೀಸರು ಮೃತದೇಹ ಮೇಲಕ್ಕೆತ್ತಲು ಕ್ರಮಕೈಗೊಳ್ಳುವ ಬದಲು ಜನರನ್ನು ಚದುರಿಸುವಲ್ಲಿ ನಿರತರಾಗಿದ್ದರು.

ಇದೇ ದಾರಿಯಾಗಿ ಸಾಗುತ್ತಿದ್ದ ಹೆಲ್ಪ್ ಇಂಡಿಯಾ ಫೌಂಡೇಶನ್ ಸ್ಥಾಪಕಾಧ್ಯಕ್ಷ ರಾಝಿಕ್ ಉಳ್ಳಾಲ್ ವಿಷಯ ತಿಳಿದು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಮೃತದೇಹವನ್ನು ದಡಕ್ಕೆಳೆದು ತರುವಲ್ಲಿ ಯಶಸ್ವಿಯಾಗಿದ್ದಾರೆ. ಬಾಯಲ್ಲಿ ನೊರೆ ಬಂದಿದ್ದು ನೀರಿಗೆ ಬೀಳುವ ಮುನ್ನವೇ ಹೃದಯಾಘಾತವಾಗಿರುವುದು ಸಾಬೀತಾಗಿದೆ. ಪ್ರತಿಬಾರಿ ಇಲ್ಲಿ ನೀರಿನ ಸೆಳೆತ ಅರಬ್ಬೀ ಸಮುದ್ರದ ಕಡೆ ಇರುತ್ತದೆ. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಂಡವರ ದೇಹ ಸಮುದ್ರಕ್ಕೆ ಹೋಗುತ್ತದೆ. ಆದರೆ ಬುಧವಾರ ಸಂಜೆ ನೀರಿನ ಸೆಳೆತ ಹರೇಕಳದತ್ತ ಇದ್ದ ಕಾರಣ ದೇಹ ಕುದುರು ಬಳಿ ಸಿಕ್ಕಿದೆ.

ಡೆತ್‌ನೋಟ್ ಪತ್ತೆ: ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ ಬಾಲಕೃಷ್ಣ ಅವರು, ಸಂಸ್ಥೆ ನನಗೆ ಬದುಕಲು ಬಿಡುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ. ಇದರ ಜತೆ ಕೌಟುಂಬಿಕ ಕಲಹದ ಬಗ್ಗೆಯೂ ಬರೆದಿರುವ ಅವರು ತನ್ನ ಸಹೋದರನ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಆರ್ಥಿಕ ಸಮಸ್ಯೆಯ ಜತೆ ಕೌಟುಂಬಿಕ ಕಲಹವೂ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net