

ಚಿಕ್ಕಬಳ್ಳಾಪುರ: ಒಳ್ಳೆಯ ಲಾಭ, ಬಸ್‌ಗಳ ಉತ್ತಮ ಕಾರ್ಯ ನಿರ್ವಹಣೆಯ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಕೆಎಸ್‌ಆರ್‌ಟಿಸಿ ವಿಭಾಗೀಯ ಕೇಂದ್ರಕ್ಕೆ 1 ಲಕ್ಷ ಬಹುಮಾನದೊಂದಿಗೆ ಪ್ರಶಸ್ತಿ ಸಿಕ್ಕಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಕೈಗೊಂಡಿದ್ದ 62 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ ಪ್ರಶಸ್ತಿಯನ್ನು ವಿಭಾಗಿಯ ನಿಯಂತ್ರಣಾಧಿಕಾರಿ ಹಿಮವರ್ಧನ ನಾಯ್ಡು ಅಲ್ಲೂರಿ ಹಾಗೂ ತಂಡಕ್ಕೆ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
* ಇಲ್ಲಿ ಮೊದಲ ಬಾರಿಗೆ ಯಶಸ್ವಿ
ಕೆಎಸ್‌ಆರ್‌ಟಿಸಿ ವಿಭಾಗದ ಕಾರ್ಯಗಾರದಲ್ಲಿ ಇದೇ ಮೊದಲ ಬಾರಿಗೆ ಹಳೆ ಸಾರಿಗೆ ವಾಹನಗಳಿಗೆ ಹೊಸದಾಗಿ ಕವಚ ನಿರ್ಮಾಣ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಗರಿಮೆಗೆ ಚಿಕ್ಕಬಳ್ಳಾಪುರ ವಿಭಾಗೀಯ ಕೇಂದ್ರ ಪಾತ್ರವಾಗಿದೆ.
ಹತ್ತಾರು ವರ್ಷಗಳ ಕಾಲ ಲಕ್ಷಾಂತರ ಕಿ.ಮೀಗಟ್ಟಲೇ ಸಂಚರಿಸಿರುವ ಹಳೇ ಕೆಎಸ್‌ಆರ್‌ಟಿಸಿ 14 ಬಸ್‌ಗಳಿಗೆ ಮೊದಲ ಬಾರಿಗೆ ಹೊಸ ರೂಪ ನೀಡಲಾಗಿದೆ. 3 ರಿಂದ 4 ಲಕ್ಷ ರೂ ವೆಚ್ಚದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ವಾಹನಗಳಿಗೆ ಹೊಸ ಕವಚವನ್ನು ಹಾಕಲಾಗಿದೆ. ಇದಕ್ಕೆ ಈ ಹಿಂದೆ ಬೆಂಗಳೂರು ಇಲ್ಲವೇ ಹಾಸನ ಪ್ರಾದೇಶಿಕ ಕಾರ್ಯಾಗಾರಕ್ಕೆ ತೆರಳಬೇಕಾಗಿತ್ತು. ಆದರೆ, ಈಗ ಇಲ್ಲಿಯೇ ಹೊಸ ಲುಕ್ ಕೊಡುವ ಕೆಲಸವನ್ನು ಕೈಗೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಕನಿಷ್ಠ 8 ರಿಂದ 9 ಲಕ್ಷ ಕಿ.ಮೀ ಸಂಚಾರ ನಡೆಸಿದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯಮಾನುಸಾರ ಗುಜರಿಗೆ ಹಾಕಬೇಕು. ಆದರೆ, ನಿಗದಿತ ಪ್ರಮಾಣ ದೂರ ಕ್ರಮಿಸುವ ಮೊದಲೇ ಕೆಲ ಬಸ್‌ಗಳು ದುಸ್ಥಿತಿಗೆ ತಲುಪಿರುತ್ತವೆ. ವಾಹನದ ಹೊರ ಕವಚ, ಬಾಗಿಲು, ಸೀಟು, ಬ್ರೇಕ್, ಬೋರ್ಡ್ ಸೇರಿದಂತೆ ನಾನಾ ಪರಿಕರಗಳು ಕಿತ್ತು ಹೋಗಿರುತ್ತವೆ. ಇದರಿಂದ ಸಿಬ್ಬಂದಿಯ ಜತೆಗೆ ಪ್ರಯಾಣಿಕರು ತೊಂದರೆ ಅನುಭವಿಸಬೇಕು. ಇದರ ಬಗ್ಗೆ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಅವಧಿಗೆ ಮೊದಲೇ ಬಸ್‌ಗಳನ್ನು ಗುಜರಿಗೆ ಕಳುಹಿಸಲಾಗುತ್ತದೆ. ಇದಕ್ಕೆ ಅವಕಾಶ ಕೊಡದೇ ಸರ್ಕಾರದ ಅನುದಾನ ಉಳಿಸಿ, ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಬಸ್‌ಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಅದರಂತೆ ಇಲ್ಲಿಯವರೆಗೂ ಈ ಕೇಂದ್ರದಲ್ಲಿ 14 ಹಳೇ ಬಸ್‌ಗಳಿಗೆ ಹೊಸ ಕವಚ ನಿರ್ಮಿಸಲಾಗಿದೆ. ಇನ್ನು ಹೊಸ ಬಸ್ ಖರೀದಿಸಲು ಒಂದಕ್ಕೆ ಕನಿಷ್ಠ 30 ಲಕ್ಷ ವೆಚ್ಚ ತಗುಲುತ್ತದೆ. ಆದರೆ, ಇಂಜಿನ್ ಮತ್ತು ಯಂತ್ರೋಪಕರಣಗಳು ಸುಸ್ಥಿತಿಯಲ್ಲಿರುವ ಬಸ್‌ಗಳಿಗೆ 3 ರಿಂದ 4 ಲಕ್ಷ ರೂ ವೆಚ್ಚದಲ್ಲಿ ತಾಂತ್ರಿಕವಾಗಿ ಕೆಲಸವನ್ನು ಕೈಗೊಂಡು, ಅಭಿವೃದ್ಧಿಪಡಿಸಲಾಗುತ್ತದೆ.
* ಇಂಜಿನಿಯರ್ ಚಿಂತನೆ
ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ ನಾಯ್ಡು ಅಲ್ಲೂರಿ ಸ್ವತಃ ಇಂಜಿನಿಯರ್ ಆಗಿದ್ದಾರೆ. ಇದಕ್ಕೆ ದುರಸ್ತಿ, ಸುಸ್ಥಿತಿಯ ನಿರ್ವಹಣೆ, ಅನುದಾನ ಉಳಿತಾಯ ಸೇರಿದಂತೆ ನಾನಾ ಯೋಜನೆಗಳಲ್ಲಿ ಸ್ಥಳೀಯವಾಗಿಯೇ ಬಸ್‌ಗಳಿಗೆ ಹೊಸ ಆಕರ್ಷಕ ರೂಪ ನೀಡುವ ಕೆಲಸವನ್ನು ಸಿಬ್ಬಂದಿಯ ಮೂಲಕ ಕೈಗೊಂಡಿದ್ದಾರೆ. ಇದು ಮೆಚ್ಚುಗೆಗೆ ಪಾತ್ರವಾಗಿದೆ.