

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಾಂಜಾ ಸಾಗಸುತ್ತಿದ್ದ ಮಹಿಳೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳು ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿದೆ.
ಭದ್ರಾವತಿ ತಾಲೂಕಿನ ಗೌಡ್ರಳ್ಳಿಯ ನಯೀಮಾ ಖಾನಂ (32) ಶಿಕ್ಷೆಗೆ ಒಳಗಾದ ಮಹಿಳೆ. ಈಕೆ 2019ರ ಮೇ 7ರಂದು ಬಸ್‌ನಲ್ಲಿ 35 ಸಾವಿರ ರೂ. ಮೌಲ್ಯದ 7 ಕೆಜಿ ಒಣ ಗಾಂಜಾ ಸಾಗಿಸುತ್ತಿದ್ದಳು. ಡಿಸಿಐಬಿ ಇನ್‌ಸ್ಪೆಕ್ಟರ್ ಸಂಗಮೇಶ್ ಪಾಟೀಲ್ ಅವರಿಗೆ ಖಚಿತ ಮಾಹಿತಿ ದೊರೆತಿತ್ತು. ಹಾಗಾಗಿ ಬಿಳಕಿ ಕ್ರಾಸ್ ಬಳಿ ಬಸ್ ತಪಾಸಣೆ ನಡೆಸಿದಾಗ ಮಹಿಳೆಯ ಕಪ್ಪು ಬಣ್ಣದ ಬ್ಯಾಗ್‌ನಲ್ಲಿ ಗಾಂಜಾ ಪತ್ತೆಯಾಗಿತ್ತು. ಬಳಿಕ ನಯೀಮಾ ಖಾನಂ ಅವರನ್ನು ಬಂಧಿಸಿ ಗಾಂಜಾ ಮತ್ತು ಮೊಬೈಲ್ ಜಪ್ತಿ ಮಾಡಲಾಗಿತ್ತು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಭದ್ರಾವತಿ ನ್ಯೂಟೌನ್ ಠಾಣೆ ಪಿಎಸ್‌ಐ(ಹಾಲಿ ಶಿವಮೊಗ್ಗ ಎಸ್ಪಿ ಕಚೇರಿಯ ಡಿಎಸ್‌ಪಿ ವಿಭಾಗ) ಜಿ.ಮೋಹನ್ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ನಯೀಮಾ ಖಾನಂ ಮೇಲಿನ ಆರೋಪಗಳು ಸಾಬೀತಾದ ಹಿನ್ನಲೆಯಲ್ಲಿ ಕಠಿಣ ಕಾರಾಗೃಹ ಮತ್ತು ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸುರೇಶ್‌ಕುಮಾರ್ ವಾದ ಮಂಡಿಸಿದ್ದರು.