ಬೃಹತ್​ ಹೊಂಡದಲ್ಲಿ ಸಿಲುಕಿದ ಕೆಎಸ್​ಆರ್​ಟಿಸಿ ಬಸ್​!

2
ಮಾಲೂರು-ಹೋಸೂರು ಮುಖ್ಯರಸ್ತೆಯಲ್ಲಿ ಮಾಲೂರು ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ರಸ್ತೆಯ ಹೊಂಡದಲ್ಲಿ ಸಿಲುಕಿರುವುದು.
Published on

ಕಿಲೋ ಮೀಟರ್​ಗಟ್ಟಲೆ ಟ್ರಾಫಿಕ್​ ಜಾಮ್​ - ಶಾಲಾ-ಕಾಲೇಜು ವಿದ್ಯಾರ್ಥಿಗಳ ಪರದಾಟ - ಮನೆಗೆ ಹಿಂತಿರುಗಿದ ಪ್ರಯಾಣಿಕರು

ಲಕ್ಕೂರು: ಇತ್ತೀಚಿಗೆ ಸುರಿದ ನಿರಂತರ ಮಳೆಯಿಂದಾಗಿ ರಸ್ತೆಯಲ್ಲಿ ಬೃಹತ್​ ಹೊಂಡಗಳು ನಿಮಾರ್ಣವಾಗಿ ಮಳೆಯ ನೀರು ರಸ್ತೆಯಲ್ಲೇ ನಿಂತು ರಸ್ತೆ ಯಾವುದೋ? ಹಳ್ಳಕೊಳ್ಳಗಳು ಯಾವುದೋ ಎನ್ನುವ ಗೊಂದಲದಲ್ಲಿ ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿದರ್ಶನವೆಂಬಂತೆ ರಸ್ತೆಯ ಹೊಂಡದಲ್ಲಿ ಕೆಸ್ಸಾರ್ಟಿಸಿ ಬಸ್​ ಸಿಲುಕಿ ಕಿ.ಮೀ.ಗಟ್ಟಲೇ ಟ್ರಾಫಿಕ್​ ಉಂಟಾಗಿದೆ.

ಮಾಲೂರು-ಹೋಸೂರು ಮುಖ್ಯರಸ್ತೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮಾಲೂರು ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ರಸ್ತೆಯ ಹೊಂಡದಲ್ಲಿ ಸಿಲುಕಿ, ಕೆಟ್ಟು ನಿಂತ ಪರಿಣಾಮ ಸುಮಾರು 10 ಕಿ.ಮಿ.ವರೆಗೂ ರಸ್ತೆ ಟ್ರಾಫಿಕ್​ ಜಾಮ್​ ಉಂಟಾಗಿ ಶಾಲಾ&ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ರಸ್ತೆಯಲ್ಲೇ ಪರದಾಡಿದರು. ಆಸ್ಪತ್ರೆಗೆ ರೋಗಿಗಳ ತಲುಪಿಸುವ ಆಂಬುಲೆನ್ಸ್​ ಗ್ರಾಮಗಳ ಇತರೆ ರಸ್ತೆಯನ್ನು ಬಳಸಿಕೊಂಡು ಮಾಲೂರು ಪಟ್ಟಣ ಸೇರಿತು. ಕಚೇರಿ ಹಾಗೂ ಕೆಲಸಕ್ಕೆ ಹೋಗುವ ಸಾರ್ವಜನಿಕರು ಮುಂದೆ ಹೋಗಲು ಸಾಧ್ಯವಾಗದೆ ಮನೆಗಳಿಗೆ ಹಿಂತಿರುಗಿದ ದುಸ್ಥಿತಿ ಎದುರಾಯಿತು. ಸಮಸ್ಯೆ ಕುರಿತು ವರದಿಯಾದರೂ ಸಹ ಎಚ್ಚೆತ್ತುಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳನ್ನು ನಾಗರಿಕರು ಎಮ್ಮೆಯ ಚರ್ಮಕ್ಕೆ ಹೋಲಿಸಿ ಅಸಮಾಧಾನ ವ್ಯಕ್ತಪಡಿಸಿದರು. ಪ್ರಯಾಣಿಕರು ಸರಿಯಾದ ರಸ್ತೆ ಹುಡುಕಿಕೊಂಡು ಅಡ್ಡಾದಿಡ್ಡಿಯಾಗಿ ಪ್ರಯಾಣ ಮಾಡುವ ಪರಿಸ್ಥಿತಿಯಾಗಿದ್ದು, ಇದಕ್ಕೆಲ್ಲ ರಸ್ತೆಯ ಕಳಪೆ ಕಾಮಗಾರಿ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ&ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ರಸ್ತೆಯ ಬಗ್ಗೆ ಹಾಗೂ ಅಪಘಾತಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇಲಾಖೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ರಸ್ತೆ ಸರಿಪಡಿಸುವ ಪ್ರಯತ್ನ ಮಾಡಿಲ್ಲ. ರಸ್ತೆಯನ್ನು 5 ವರ್ಷಗಳಿಗೆ ಗುತ್ತಿಗೆ ಪಡೆದ ಗುತ್ತಿಗೆದಾರರೂ ಸಹ ರಸ್ತೆಯ ಗುಂಡಿಗಳನ್ನೂ ಮುಚ್ಚಲು ಪ್ರಯತ್ನಿಸಿಲ್ಲ ಎಂದು ಆರೋಪಿಸಿದರು.

ಮಾಲೂರು-ಹೋಸೂರು ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಸುಮಾರು 15 ಕಿ.ಮಿ.ವರೆಗೂ ರಸ್ತೆ ಕಿತ್ತು ಹೋಗಿದ್ದು, ಧೂಳು ಹೆಚ್ಚಾಗಿದೆ. ಸಂಚಾರ ಮಾಡುವಾಗ ಉಸಿರಾಡಲು ಕಷ್ಟವಾಗುತ್ತಿದೆ. ಮಳೆಗಾಲದಲ್ಲಿ ಹೊಂಡ ಯಾವುದು ರಸ್ತೆ ಯಾವುದು ಎಂದು ಕಾಣಿಸುತ್ತಿಲ್ಲ. ರಸ್ತೆಯಲ್ಲಿ ಸುರಕ್ಷತಾ ಬೋರ್ಡ್​ ಗಳು, ತಿರುವುಗಳ, ರಸ್ತೆ ಉಬ್ಬುಗಳ ಲಕ ಅಳವಡಿಸಿಲ್ಲ. ರಸ್ತೆ ಕಳಪೆ ಕಾಮಗಾರಿ ಮಾಡಿ ಸಾರ್ವಜನಿಕರ ಪ್ರಾಣ ತೆಗೆಯುತ್ತಿದ್ದಾರೆ. - ಕೆ.ಶ್ರೀನಿವಾಸ್​, ಕೋಡಿಹಳ್ಳಿ ನಿವಾಸಿ ತುರ್ತು ಪರಿಸ್ಥಿತಿಯಲ್ಲಿ ಅಥವಾ ಮಳೆಗಾಲದಲ್ಲಿ ರೋಗಿಗಳು ಪಟ್ಟಣಕ್ಕೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು, ಇಲ್ಲವೇ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಿಲ್ಲದಂತಾಗಿದೆ. ಅದರ ಬದಲಾಗಿ ಮನೆಯಲ್ಲಿ ಪ್ರಾಣ ಬಿಡಬೇಕು. ಪಕ್ಕದ ತಮಿಳುನಾಡಿನಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದ್ದಾರೆ. ಅದೇ ಸಮಯದಲ್ಲಿ ನಮ್ಮ ರಾಜ್ಯದಲ್ಲಿ ನಿರ್ಮಿಸಿರುವ ರಸ್ತೆಗಳು ವಾಹನಗಳ ಓಡಾಟಕ್ಕೆ ಇಲ್ಲವೆ ಮಳೆ ನೀರಿಗೆ ಕಿತ್ತು ಹೋಗುತ್ತಿವೆ ಎಂದರೆ ಎಂತಹ ಗುಣಮಟ್ಟ ಕಾಯ್ದುಕೊಂಡಿದ್ದಾರೆ ಎಂಬುದನ್ನು ಯೋಚಿಸಬೇಕು. ಇಲಾಖೆ ಸಾರ್ವಜನಿಕರು ಪ್ರಾಣದ ಜತೆ ಆಟವಾಡುತ್ತಿದ್ದಾರೆ. - ಎಲ್​.ಎಂ.ರಮೇಶ್​, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಲಕ್ಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net