

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲೂಕು ಒಳಗೊಂಡ ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಬಸ್ ಡಿಪೋ ವಿಭಾಗಕ್ಕೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಯೋಜನೆ ಆರಂಭವಾಗಿ (ಜು.11) ತಿಂಗಳು ಪೂರ್ಣವಾಗಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸುಮಾರು 27.96 ಲಕ್ಷ ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ. ಪಾಸ್ ಪಡೆದು ಸಂಚರಿಸುತ್ತಿದ್ದ ವಿದ್ಯಾರ್ಥಿನಿಯರು, ಮಹಿಳಾ ಉದ್ಯೋಗಿಗಳಿಗೂ ಯೋಜನೆಯಿಂದ ಲಾಭವಾಗಿದೆ.
ಶೇ.30 ಮಹಿಳಾ ಪ್ರಯಾಣಿಕರು ಹೆಚ್ಚಳ: ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆ ಬರೋಬ್ಬರಿ ಶೇ.30 ಏರಿಕೆಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಆಟೋ, ಟೆಂಪೋ, ಇತರ ವಾಹನಗಳ ಪ್ರಯಾಣಕ್ಕೆ ಗುಡ್ ಬೈ ಹೇಳಿ, ಬಸ್‌ನತ್ತ ಮುಖ ಮಾಡಿದ್ದಾರೆ. ತಿಂಗಳಲ್ಲಿ 27.96 ಲಕ್ಷ ಮಹಿಳೆಯರು ಪ್ರಯಾಣಿಸಿ ಚಿಕ್ಕಬಳ್ಳಾಪುರ ಬಸ್ ಘಟಕಕ್ಕೆ ನಾರಿ ಶಕ್ತಿಯೇ ಶಕ್ತಿಯಾಗಿದೆ.
ಪ್ರತಿದಿನ ಸರಾಸರಿ 12-15 ಲಕ್ಷ ಲಾಭ: ಶಕ್ತಿ ಯೋಜನೆ ಬಳಿಕ ಚಿಕ್ಕಬಳ್ಳಾಪುರ ಬಸ್ ಡಿಪೋ ವಿಭಾಗಕ್ಕೆ ನಿರೀಕ್ಷೆ ಮೀರಿ ಲಾಭವಾಗಿದೆ. ನಿರ್ವಹಣೆ ವೆಚ್ಚ ಸರಿದೂಗಿಸುವುದೇ ಕಷ್ಟಕರವಾಗಿದ್ದ ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ಶಕ್ತಿ ಯೋಜನೆ ಭರಪೂರ ಲಾಭ ತಂದಿದೆ. ಈ ಹಿಂದೆ ಪ್ರತಿ ದಿನ 70 ಲಕ್ಷ ರೂ. ಆದಾಯ ಈಗ 85 ಲಕ್ಷ ರೂ.ವರೆಗೆ ಬರುತ್ತಿದೆ. ತಿಂಗಳ ಅವಧಿಯಲ್ಲಿ 9.11 ಕೋಟಿ ರೂ. ವಹಿವಾಟು ನಡೆಸಿ, ಶೇ.32 ಹೆಚ್ಚಿನ ಲಾಭಾಂಶ ಕಂಡಿದೆ.
ಏರಿಕೆ ಕಂಡ ಗ್ರಾಮಾಂತರ ಸಾರಿಗೆ: ಶಕ್ತಿ ಯೋಜನೆಗೂ ಮೊದಲು ದೂರದ ಟ್ರಿಪ್‌ಗಳಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದ ಘಟಕಕ್ಕೆ ಗ್ರಾಮಾಂತರ, ಹಳ್ಳಿಗಳ ರೂಟ್‌ಗಳಲ್ಲಿ ನಿರೀಕ್ಷಿತ ಆದಾಯ ಬರುತ್ತಿರಲಿಲ್ಲ. ಶಕ್ತಿ ಯೋಜನೆ ಜಾರಿಯಾದ ಬಳಿಕ ಗ್ರಾಮಾಂತರ ಸಾರಿಗೆಗೆ ಹಳ್ಳಿಗಳಿಂದ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ಮಾರ್ಗದಲ್ಲಿ ಇಪಿಕೆಎಂ (ಅರ್ನಿಂಗ್ ಪರ್ ಅವರ್) 15-20 ರೂ. ಇದ್ದದ್ದು, ಈಗ 30-40 ರೂ.ರವರೆಗೆ ಏರಿಕೆಯಾಗಿದೆ. ಅಂದರೆ ಪ್ರತಿದಿನ ಕನಿಷ್ಠ 8 ಸಾವಿರ ರೂ. ಕಲೆಕ್ಷನ್ ಆಗುತ್ತಿದ್ದ ಜಾಗದಲ್ಲಿ ಈಗ 10-12 ಸಾವಿರ ರೂ.ಕಲೆಕ್ಷನ್ ಆಗುತ್ತಿದೆ ಹಾಗೂ ಲಾಂಗ್ ರೂಟ್‌ಗಳಲ್ಲಿ 40 ರೂ. ಅನಿರ್ಂಗ್ ಪರ್ ಕಿ.ಮೀ ಬರುತ್ತಿತ್ತು. ಈಗ ಇಪಿಕೆಎಂ ಶೇ.40 ಹೆಚ್ಚಾಗಿ 72 ರೂ. ಬರುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಚ್ಚಿದ ಅಂತರರಾಜ್ಯ ಪ್ರಯಾಣಿಕರ ಸಂಖ್ಯೆ: ಚಿಕ್ಕಬಳ್ಳಾಪುರ ವಿಭಾಗದಿಂದ ತುಮಕೂರು, ಬೆಂಗಳೂರು, ಕೋಲಾರ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆಯಲ್ಲದೆ ಪಕ್ಕದ ಆಂಧ್ರ ಪ್ರದೇಶದ ಹಿಂದೂಪುರ, ಅನಂತಪುರ, ಮಂತ್ರಾಲಯ, ಗೋರಂಟ್ಲಾ, ಕದಿರಿ, ಪುಟ್ಟಪರ್ತಿ ಸೇರಿ ವಿವಿಧ ಜಿಲ್ಲೆಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿರುವುದರಿಂದ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ.
ಶಕ್ತಿ ಯೋಜನೆ ಮೂಲಕ ಸಾರಿಗೆ ಇಲಾಖೆ ಮತ್ತಷ್ಟು ಚೇತರಿಕೆ ಕಂಡಿದೆ. ಗ್ರಾಮಾಂತರ ಮಾರ್ಗಗಳಲ್ಲಿ ನಿರೀಕ್ಷೆ ಮೀರಿ ಪ್ರತಿಕ್ರಿಯೆ ಬರುತ್ತಿದೆ. ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಎಲ್ಲ ಭಾಗಗಳಿಗೂ ಬಸ್ ಸೌಲಭ್ಯ ನೀಡಲಾಗುತ್ತಿದೆ. ಪ್ರತಿದಿನ ಸರಾಸರಿ 12-15 ಲಕ್ಷ ರೂ. ಅಧಿಕ ಆದಾಯ ಸಂಗ್ರಹವಾಗಿದೆ. 27.96 ಲಕ್ಷ ಮಹಿಳೆಯರಿಗೆ 9.11 ಕೋಟಿ ರೂ. ಮೌಲ್ಯದ ಟಿಕೆಟ್ ವಿತರಣೆ ಮಾಡಲಾಗಿದೆ. ಇದರಲ್ಲಿ ಒಟ್ಟು ಶೇ.32 ಆದಾಯ ಹೆಚ್ಚಾಗಿದೆ.
ಹಿಮವರ್ಧನ ನಾಯ್ಡು ಅಲ್ಲೂರಿ, ವಿಭಾಗೀಯ ನಿಯಂತ್ರಣಾಧಿಕಾರಿ, ಚಿಕ್ಕಬಳ್ಳಾಪುರ ವಿಭಾಗ