ಹಿರೇಮಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ

bus
ಚಿಕ್ಕಮಗಳೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆಗೆ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡಿದರು. ಎಚ್.ಪಿ.ಮಂಜೇಗೌಡ, ಮಂಗಳಾ ತಮ್ಮಯ್ಯ, ಓಂಕಾರಮೂರ್ತಿ, ಶಿವಾಜಿ, ಎಚ್.ಎಸ್.ಜಗದೀಶ್ ಇತರರಿದ್ದರು.
Published on

ಚಿಕ್ಕಮಗಳೂರು: ಗ್ರಾಮಗಳಿಗೆ ಬಸ್ ಸಂಚಾರ ಕಲ್ಪಿಸಿದಾಗ ಸಾರ್ವಜನಿಕರು ಅದರ ಪ್ರಯೋಜನ ಪಡೆದುಕೊಳ್ಳಬೇಕು. ಆಗ ಮಾತ್ರ ಕೆಎಸ್‌ಆರ್‌ಟಿಸಿ ಲಾಭದಲ್ಲಿ ನಡೆಯಲು ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಹಿರೇಮಗಳೂರು ಗ್ರಾಮ ಸಮೀಪ ಅಂಬೇಡ್ಕರ್ ವೃತ್ತದಿಂದ ನಗರ ಸಾರಿಗೆ ಬಸ್‌ಗೆ ಚಾಲನೆ ನೀಡಿ ಮಾತನಾಡಿ, ಸಂಸ್ಥೆಗೆ ಹೆಚ್ಚು ಲಾಭ ಬಂದಾಗ ಪ್ರತಿ ಹಳ್ಳಿಗೂ ಬಸ್ ಸೇವೆ ಕಲ್ಪಿಸಲು ಸಾಧ್ಯ ಎಂದು ತಿಳಿಸಿದರು.
ಚಿಕ್ಕಕುರುಬರಹಳ್ಳಿ, ಬೈಪಾಸ್, ನರಿಗುಡ್ಡನಹಳ್ಳಿ ಹಾಗೂ ದೊಡ್ಡಕುರುಬರಹಳ್ಳಿ ಮಾರ್ಗವಾಗಿ ಪವಿತ್ರವನದವರೆಗೂ ಬಸ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದರು. ಕೂಡಲೇ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗೆ ಚರ್ಚಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ನಗರ ಸಾರಿಗೆ ಬಸ್ ವ್ಯವಸ್ಥೆಯು ಗ್ರಾಮಸ್ಥರಿಗೆ ಸಮಯಾನುಸಾರ ಬೆಳಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ಸಂಚರಿಸುತ್ತದೆ. ಎಐಟಿ ಕಾಲೇಜು, ಜಿಪಂ ಹಾಗೂ ಪವಿತ್ರವನ ಮಾರ್ಗವಾಗಿ ಸಂಚರಿಸುವುದರಿಂದ ಗ್ರಾಮಸ್ಥರು ಬಸ್ ವ್ಯವಸ್ಥೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕೆಪಿಸಿಸಿ ಸಂಯೋಜಕ ಹಿರೇಮಗಳೂರು ರಾಮಚಂದ್ರ ಮಾತನಾಡಿ, ಹಿರೇಮಗಳೂರು ಸೇರಿದಂತೆ ವಿವಿಧ ಗ್ರಾಮಗಳ ನಿವಾಸಿಗಳ ಮನವಿ ಮೇರೆಗೆ ಶಾಸಕರು ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಮಾರ್ಗದಿಂದ ಸಂಚರಿಸುವ ಮಹಿಳೆಯರು, ವೃದ್ಧರು ಹಾಗೂ ಶಾಲಾ ಮಕ್ಕಳಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಮಂಗಳಾ ತಮ್ಮಯ್ಯ, ಮುಖಂಡರಾದ ಓಂಕಾರಮೂರ್ತಿ, ಶಿವಾಜಿ, ಎಚ್.ಎಸ್.ಜಗದೀಶ್, ಸಂತೋಷ್ ಲಕ್ಯಾ, ಮೋಹನ್‌ಕುಮಾರ್, ಯೋಗೀಶ್, ಸುರೇಶ್, ರಘು, ಚೇತನ್, ಈಶ್ವರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net