

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಪುತ್ತೂರಿನಿಂದ ಬೆಟ್ಟಂಪಾಡಿ- ಪಾಣಾಜೆ ಮೂಲಕವಾಗಿ ಕೇರಳದ ಕಾಟುಕುಕ್ಕೆಗೆ ಕೆಎಸ್ಸಾರ್ಟಿಸಿ ಬಸ್ ಸಂಚಾರವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದಲ್ಲಿ ಆರಂಭಗೊಂಡಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಮುಗಿಯುವ ತನಕ ಆರೇಳು ದಿನಗಳ ಕಾಲ ಪ್ರಾಯೋಗಿಕವಾಗಿ ಬಸ್ ಸಂಚಾರ ನಡೆಯಲಿದ್ದು, ಜೂನ್ ತಿಂಗಳಲ್ಲಿ ಕಾಲೇಜು ಆರಂಭದ ಬಳಿಕ ನಿರಂತರವಾಗಿ ಬಸ್ ಓಡಾಟ ನಡೆಯಲಿದೆ.
ಕರ್ನಾಟಕ- ಕೇರಳ ಗಡಿ ಪ್ರದೇಶವಾದ ಪಾಣಾಜೆ ಗ್ರಾಮದ ಅರ್ಧಮೂಲೆಯಲ್ಲಿ ಶಾಸಕ ಅಶೋಕ್‌ಕುಮಾರ್ ರೈ ಮಂಗಳವಾರ ಪುತ್ತೂರು- ಕಾಟುಕುಕ್ಕೆ ಅಂತಾರಾಜ್ಯ ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ಕಾಟುಕುಕ್ಕೆ ಭಾಗದಿಂದ ಬೆಟ್ಟಂಪಾಡಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆಗಳಾಗುತ್ತಿದ್ದು, ಈ ಭಾಗಕ್ಕೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ವ್ಯವಸ್ಥೆ ಮಾಡಬೇಕೆಂದು 1 ವರ್ಷದ ಹಿಂದೆಯೇ ಬೇಡಿಕೆ ಇತ್ತು. ಈ ಬೇಡಿಕೆಯನ್ನು ಈಡೇರಿಸುವ ಕೆಲಸ ಆಗಿದ್ದು, ಕೇರಳದ ಮಕ್ಕಳಿಗೂ ಶಕ್ತಿ ಯೋಜನೆಯಡಿ ಅವಕಾಶ ಕಲ್ಪಿಸಲಾಗುವುದು. ಈ ಭಾಗದ ಜನತೆ ಬಸ್ ಸದುಪಯೋಗಪಡಿಸಿಕೊಂಡಲ್ಲಿ ಪಾಣಾಜೆ ಭಾಗಕ್ಕೆ ಇನ್ನಷ್ಟು ಬಸ್ ನೀಡಲಾಗುವುದು. ಜತೆಗೆ ಕರ್ನಾಟಕ ಕೇರಳ ಗಡಿಭಾಗದ ನಡುವಣ ಹದಗೆಟ್ಟಿರುವ ರಸ್ತೆ ದುರಸ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಅಶೋಕ್‌ಕುಮಾರ್ ರೈ ತಿಳಿಸಿದ್ದಾರೆ.
ಪಾಣಾಜೆ ಗ್ರಾಪಂ ಅಧ್ಯಕ್ಷೆ ಮೈಮನುತ್ತುಲ್ ಮೆಹರಾ, ಉಪಾಧ್ಯಕ್ಷೆ ಜಯಶ್ರೀ, ಕೆಎಸ್ಸಾರ್ಟಿಸಿ ಜಿಲ್ಲಾ ಮ್ಯಾನೇಜರ್ ಜೈಶಾಂತ್, ಪುತ್ತೂರು ಘಟಕದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಕಾಶ್, ಕೆಎಸ್ಸಾರ್ಟಿಸಿ ಅಧಿಕಾರಿ ನಟರಾಜ್, ಪಾಣಾಜೆ ಗ್ರಾಪಂ ಸದಸ್ಯೆ ವಿಮಲಾ ಮಹಾಲಿಂಗ ನಾಯ್ಕ, ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸದಾನಂದ ನಾಯ್ಕ, ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದ ಮಾಜಿ ಮೊಕ್ತೇಸರ ನಾರಾಯಣ ಮೌವ್ವಾರ್, ಎಣ್ಮಕಜೆ ಗ್ರಾಪಂ ಸದಸ್ಯ ರಾಮಚಂದ್ರ, ಸ್ಥಳೀಯ ಪ್ರಮುಖರಾದ ವಿಶ್ವನಾಥ ರೈ ಕಡಮಾಜೆ, ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಬಾಬು ರೈ ಕೋಟೆ, ಜಗನ್ಮೋಹನ್ ರೈ ಸೂರಂಬೈಲು, ಅಬೂಬಕ್ಕರ್ ಆರ್ಲಪದವು, ರಘುನಾಥ ರೈ ಪಡ್ಡಂಬೈಲು, ಸದಾಶಿವ ರೈ ಸೂರಂಬೈಲು, ಪದ್ಮನಾಭ ರೈ ಸೂರಂಬೈಲು ಮತ್ತಿತರರಿದ್ದರು. ಎಣ್ಮಕಜೆ ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ಸ್ವಾಗತಿಸಿದರು. ಯುವಕ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು.
ಸರ್ಕಾರಿ ವ್ಯವಸ್ಥೆ ನಮ್ಮದೆಂಬ ಮನೋಭಾವ
ನಮ್ಮಲ್ಲಿ ಬಸ್ಸಿನ ಕೊರತೆಯಿಲ್ಲ. ಆದರೆ ಪ್ರಸ್ತುತ ಚಾಲಕ, ನಿರ್ವಾಹಕರ ಕೊರತೆಯಿದೆ. ಪುತ್ತೂರಿಗೆ 500 ಮಂದಿ ಚಾಲಕ/ ನಿರ್ವಾಹಕರ ಬೇಡಿಕೆ ಮುಂದಿಡಲಾಗಿದ್ದು, ಒಂದು ತಿಂಗಳೊಳಗೆ ಬರುವ ನಿರೀಕ್ಷೆಯಿದೆ. ಆ ಬಳಿಕ ಬೇಡಿಕೆ ಇರುವ ಎಲ್ಲ ಕಡೆಗಳಿಗೂ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ಸ್ವರ್ಗಕ್ಕೂ ಬಸ್ ಸಂಚಾರದ ಬೇಡಿಕೆಯಿದ್ದು, ಈ ಹಿಂದೆ ಓಡಾಡುತ್ತಿದ್ದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಸ್ ಓಡಾಟಕ್ಕೆ ತೊಂದರೆ ನೀಡುವುದು, ಚಾಲಕ, ನಿರ್ವಾಹಕರಿಗೆ ಹೊಡೆಯಲು ಹೋಗುವುದು ಮಾಡಿದರೆ ಸಂಚಾರ ಸ್ಥಗಿತಗೊಳಿಸಬೇಕಾಗುತ್ತದೆ. ಸರ್ಕಾರದ ವ್ಯವಸ್ಥೆ ನಮ್ಮದೇ ಎಂಬ ಭಾವನೆ ಪ್ರತಿಯೊಬ್ಬರ ಮನಸ್ಸಿನಲ್ಲಿರಬೇಕು ಎಂದು ಅಶೋಕ್‌ಕುಮಾರ್ ರೈ ಕಿವಿಮಾತು ಹೇಳಿದ್ದಾರೆ.
ಕೆಎಸ್ಸಾರ್ಟಿಸಿ ಬಸ್ ಚಾಲಕ/ ನಿರ್ವಾಹಕ ಹುದ್ದೆಗೆ ಜಿಲ್ಲೆಯ ಸ್ಥಳೀಯರೇ ಅರ್ಜಿ ಸಲ್ಲಿಸಿದರೆ ಸಮಸ್ಯೆ ಕಡಿಮೆಯಾಗುತ್ತದೆ. ನಮ್ಮ ಯುವಕರಿಗೂ ಉದ್ಯೋಗ ಆಗುತ್ತದೆ ಎಂದು ಹೇಳುತ್ತಾ ಪ್ರೋತ್ಸಾಹಿಸುತ್ತಾ ಬಂದಿದ್ದರೂ ಈ ಬಾರಿಯೂ ಯಾರೂ ಆಸಕ್ತಿ ತೋರಿಸಿಲ್ಲ. ಈ ಬಾರಿ ನೇಮಕಗೊಂಡ 3,000 ಮಂದಿಯಲ್ಲಿ ದ.ಕ. ಜಿಲ್ಲೆಯಿಂದ ಒಬ್ಬನೇ ಇರುವುದು. ಇಲ್ಲಿಯವರು ಯಾರೂ ಇಲ್ಲ. ಅಶೋಕ್‌ಕುಮಾರ್ ರೈ, ಶಾಸಕರು https://www.vijayavani.net/mescom-meeting-4 https://www.vijayavani.net/journalist-hamza-malars-beary-books-released