

ಪುತ್ತೂರು ಗ್ರಾಮಾಂತರ: 2 ತಿಂಗಳಿನಿಂದ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಿರುವ ಕಾರಣ ಕೊಳ್ತಿಗೆ ಗ್ರಾಮದ ಜನತೆಗೆ ಬಸ್ ಸಂಚಾರ ಸಮಸ್ಯೆ ಎದುರಾಗಿದ್ದು, ಕೂಡಲೇ ಬಸ್ ವ್ಯವಸ್ಥೆ ಪುನರಾರಂಭಿಸಬೇಕು ಎಂದು ಆಗ್ರಹಿಸಿ ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ ನೇತೃತ್ವದಲ್ಲಿ ಪಂಚಾಯಿತಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಪುತ್ತೂರು ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್ಗೆ ಮನವಿ ಸಲ್ಲಿಸಿದರು.
ಈ ಭಾಗಕ್ಕೆ ಅನೇಕ ವರ್ಷಗಳಿಂದ ಬರುತ್ತಿದ್ದ ಕೆಲವು ಕೆಎಸ್ಸಾರ್ಟಿಸಿ ಬಸ್ಗಳ ಸಂಚಾರವನ್ನು ಎರಡು ತಿಂಗಳಿನಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಕೆಸ್ಸಾರ್ಟಿಸಿ ಬಸ್ಗಳನ್ನೇ ಅವಲಂಬಿಸಿಕೊಂಡಿದ್ದ ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಗಳಾಗುತ್ತಿದೆ ಎಂಬ ವಿಚಾರವನ್ನು ಡಿಪೋ ಮ್ಯಾನೇಜರ್ ಗಮನಕ್ಕೆ ತರಲಾಯಿತು.
ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್., ಸದಸ್ಯರಾದ ಪವನ್ ಡಿ.ಜಿ., ವೇದಾವತಿ, ಯಶೋದಾ, ಪುತ್ತೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮಳ ರಾಮಚಂದ್ರ, ಕಾಂಗ್ರೆಸ್ ಮುಖಂಡರಾದ ರಾಮಚಂದ್ರ ಸೊರಕೆ, ರವೀಂದ್ರ ರೈ ನೆಕ್ಕಿಲು ನಿಯೋಗದಲ್ಲಿದ್ದರು.
ಜುಲೈ 1ರಿಂದ ಬಸ್ ಸೇವೆ ಭರವಸೆ
ಪ್ರಸ್ತುತ ಪುತ್ತೂರು ಕೆಎಸ್ಸಾರ್ಟಿಸಿ ಡಿಪೋದಲ್ಲಿ ಬಸ್ಸು ಚಾಲಕರ ಹಾಗೂ ನಿರ್ವಾಹಕರ ಕೊರತೆ ಇರುವುದು ಸಮಸ್ಯೆಗೆ ಕಾರಣ. ಇದೀಗ ಚಾಲಕ- ನಿರ್ವಾಹಕರ ನೇಮಕಾತಿ ನಡೆಯುತ್ತಿದ್ದು, ಜುಲೈ 1ರಿಂದ 80 ಮಂದಿ ಸಿಬ್ಬಂದಿ ಡಿಪೋಗೆ ಸೇರಿಕೊಳ್ಳಲಿದ್ದಾರೆ. ಜುಲೈ 1ರಿಂದ ಮತ್ತೆ ಬಸ್ ಸೇವೆಯನ್ನು ಹಿಂದಿನಂತೆಯೇ ನೀಡಲಿದ್ದೇವೆ ಎಂದು ಡಿಪೋ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್ ಭರವಸೆ ನೀಡಿರುವುದಾಗಿ ಪುತ್ತೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮಳ ರಾಮಚಂದ್ರ ತಿಳಿಸಿದ್ದಾರೆ.