ಸಹಜ ಸ್ಥಿತಿಯತ್ತ ಸಾರಿಗೆ ಸಂಚಾರ

07 Nela ph 05 KSRTC Bus Depo
Published on

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಕಾರ್ಯಾಚರಣೆ ಬಹುತೇಕ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮಂಗಳೂರು ವಿಭಾಗದಲ್ಲಿ ಮತ್ತಷ್ಟು ಸಿಬ್ಬಂದಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಶನಿವಾರ 125ಕ್ಕೂ ಹೆಚ್ಚು ಬಸ್‌ಗಳು ಸಂಚರಿಸಿವೆ. ಇಂಟರ್ ಸ್ಟೇಟ್ ಮಧುರೈ, ಹೈದರಾಬಾದ್, ಕಾಸರಗೋಡು, ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ತಾಣಗಳಿಗೆ ಶನಿವಾರ ಬಸ್ ಸಂಚರಿಸಿವೆ. ಪ್ರಯಾಣಿಕರಿಗೆ ಸಮಸ್ಯೆಯಾಗಿಲ್ಲ. ಸದ್ಯ ಶೇ.50ರಷ್ಟು ಬಸ್‌ಗಳು ಸಂಚರಿಸಿವೆ. ಏ.11ರಂದು ಇನ್ನಷ್ಟು ಮಂದಿ ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಮರಳುವ ಸೂಚನೆ ಸಿಕ್ಕಿದೆ ಎಂದು ಕೆಎಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ತಿಳಿಸಿದ್ದಾರೆ.

ಉಡುಪಿಯಲ್ಲಿ 12 ಬಸ್ ಸಂಚಾರ: ಉಡುಪಿಯಲ್ಲಿ 12 ಬಸ್ ಸಂಚಾರ ಆರಂಭ ಮಾಡಿವೆ. ಉಡುಪಿಯಿಂದ ಬೆಂಗಳೂರಿಗೆ 5, ಮೈಸೂರಿಗೆ 3, ಹುಬ್ಬಳ್ಳಿಗೆ 2, ಕಾರ್ಕಳಕ್ಕೆ 2 ಬಸ್ಸುಗಳ ಸಂಚಾರ ನಡೆಸಿವೆ. ಜತೆಗೆ ಖಾಸಗಿ ಬಸ್ಸುಗಳು ಹೆಚ್ಚುವರಿ ಸೇವೆ ಒದಗಿಸುವ ಮೂಲಕ ಸಹಕಾರ ನೀಡಿದ್ದಾರೆ. ಭಾನುವಾರ ಇನ್ನಷ್ಟು ಮಂದಿ ನೌಕರರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಘಟಕ, ನಿಲ್ದಾಣದಲ್ಲಿ ನಿಷೇಧಾಜ್ಞೆ: ರಾಜ್ಯ ಸಾರಿಗೆ ನೌಕರರ ಒಕ್ಕೂಟ ಅನಿರ್ಧಿಷ್ಟಾವಧಿ ಮುಷ್ಕರ ಹಿನ್ನೆಲೆ ಕರಾರಸಾ ನಿಗಮದ ಕುಂದಾಪುರ ಮತ್ತು ಉಡುಪಿ ತಾಲೂಕಿನ ಆಸ್ತಿಪಾಸ್ತಿ ಮತ್ತು ವಾಹನಗಳಿಗೆ ಹಾನಿ ಉಂಟುಮಾಡಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಹೊರಡಿಸಲಾಗಿದೆ. ಉಡುಪಿ ಕೆಎಸ್‌ಆರ್‌ಟಿಸಿ ಘಟಕ, ಪುತ್ತೂರು ಹಾಗೂ ಸಿಟಿ ಬಸ್ ನಿಲ್ದಾಣ, ಉಡುಪಿ ಮತ್ತು ಕುಂದಾಪುರ ಕೆಎಸ್‌ಆರ್‌ಟಿಸಿ ಘಟಕ , ವಡೇರಹೋಬಳಿ ಹಾಗೂ ಕುಂದಾಪುರ ಬಸ್ ನಿಲ್ದಾಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಏ.9ರಿಂದ ಪ್ರತಿಭಟನೆ ಮುಗಿವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಡಿಸಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net