

ಮಂಗಳೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡ, ಪಡುಕೋಣೆ, ಹಡವು, ಬಡಾಕೆರೆ, ಹಕ್ಲಾಡಿ, ಗುಲ್ವಾಡಿ,ಆಲೂರು ಗ್ರಾಮಸ್ಥರು ಸರ್ಕಾರಿ ಬಸ್‌ಗೆ ಆಗ್ರಹಿಸಿ ಮಂಗಳವಾರ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಡಿವೈಎಫ್‌ಐ, ಜನವಾದಿ ಮಹಿಳಾ ಸಂಘಟನೆ, ಸಿಐಟಿಯು ನೇತೃತ್ವದಲ್ಲಿ ಮಂಗಳೂರಿನ ಬಿಜೈನಲ್ಲಿರುವ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ (ಬಸ್ಸು ನಿಲ್ದಾಣ) ಮುಂಭಾಗ ಪ್ರತಿಭಟನೆ ನಡೆಸಿದರು. ಕಳೆದ ನಾಲ್ಕು ತಿಂಗಳಿನಿಂದ ಗ್ರಾಮ ಪಂಚಾಯಿತಿ ಮುಂಭಾಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ಬೇಡಿಕೆ ಈಡೇರದೆ ಇರುವುದರಿಂದ ನೂರು ಕಿಮೀ ಗೂ ಹೆಚ್ಚು ದೂರ ಇರುವ ಮಂಗಳೂರಿನ ವಿಭಾಗೀಯ ಕಚೇರಿ ಮುಂಭಾಗ ಬಂದು ಪ್ರತಿಭಟನೆ ನಡೆಸಿದರು.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಕ್ತಿ ಯೋಜನೆಯ ಫಲ ತಮಗೆ ಸಿಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಗಳಲ್ಲಿ ಸರ್ಕಾರಿ, ಖಾಸಗಿ ಬಸ್ಸುಗಳು ಓಡಾಡದೆ ಇರುವುದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜು ತಲುಪಲು, ಕಾರ್ಮಿಕರು, ನೌಕರರು ಉದ್ಯೋಗದ ಸ್ಥಳಗಳಿಗೆ ಸಮಯಕ್ಕೆ ಸರಿಯಾಗಿ ತಲುಪದೆ ಅನುಭವಿಸುತ್ತಿರುವ ಕಷ್ಟಗಳನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಮುಂದೆ ಬಿಚ್ಚಿಟ್ಟರು. ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಸ್ಥಳಕ್ಕೆ ಬಂದು ಅಹವಾಲು ಆಲಿಸಿ, ಮನವಿ ಸ್ವೀಕರಿಸಿದರು. ಶೀಘ್ರವೇ ಗ್ರಾಮಗಳಿಗೆ ಭೇಟಿ ನೀಡಿ ಪರಿಹಾರ ಒದಗಿಸಲು ಯತ್ನಿಸುವುದಾಗಿ ತಿಳಿಸಿದರು, ಈಗಾಗಲೆ ಬೇಡಿಕೆ ಇರುವ ಗ್ರಾಮಗಳಿಗೆ ಬಸ್ ಓಡಿಸಲು ಕೆಎಸ್‌ಆರ್‌ಟಿಸಿಗೆ ಪರ್ಮಿಟ್ ಒದಗಿಸಲು ಆರ್‌ಟಿಒಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ, ನಾಡ ಗ್ರಾಮ ಪಂಚಾಯಿತಿ ಸದಸ್ಯ, ಕಾರ್ಮಿಕ ನಾಯಕ ರಾಜು ಪಡುಕೋಣೆ, ಸಿಪಿಐಎಂ ಹಿರಿಯ ನೇತಾರ ಕೆ.ಶಂಕರ್, ವೆಂಕಟೇಶ ಕೋಣಿ, ಸ್ಥಳೀಯ ಪ್ರಮುಖರಾದ ರಾಜೇಶ್ ಪಡುಕೋಣೆ, ನಾಗರತ್ನ ನಾಡ, ಶೀಲಾವತಿ ಹಡವು, ಗ್ರಾಪಂ ಸದಸ್ಯೆ ಶೋಭಾ, ನಿಸರ್ಗ ಪಡುವರಿ, ನಿಸರ್ಗ ಪಡುಕೋಣೆ, ಬಲ್ಕೀಸ್ ಕುಂದಾಪುರ, ರೊನಾಲ್ಡ್ ರಾಜೇಶ್ ಬೈಂದೂರು, ಡಿವೈಎಫ್‌ಐ ದಕ ಜಿಲ್ಲಾ ಮುಖಂಡರಾದ ಬಿ.ಕೆ. ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ರಿಜ್ವಾನ್ ಹರೇಕಳ, ಮಾಜಿ ಕಾರ್ಪೊರೇಟರ್ ಜಯಂತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.