ಕೆಎಸ್‌ಆರ್‌ಟಿಸಿ ಬಸ್‌ಗೆ ಬ್ರೇಕ್ - ಏರಿಯಾ ಸ್ಕೀಂ ಜಾರಿಯಲ್ಲಿದ್ದರೂ ಕರಾವಳಿಗಿಲ್ಲ ಪರವಾನಗಿ

bus
Published on

ಪ್ರಕಾಶ್ ಮಂಜೇಶ್ವರ, ಮಂಗಳೂರು

ಕರ್ನಾಟಕ ಪ್ರದೇಶ ಸಾರಿಗೆ ಸಮಗ್ರ ರಾಷ್ಟ್ರೀಕರಣ(ಕಂಪ್ರೆನ್ಸಿವ್ ಏರಿಯಾ ಸ್ಕೀಮ್) ಯೋಜನೆ 2019ರ ಮಾರ್ಚ್ 7ರಂದು ಜಾರಿಗೆ ತರುವ ಮೂಲಕ ರಾಜ್ಯದ ರಸ್ತೆಗಳಲ್ಲಿ ಕೆಎಸ್‌ಆರ್‌ಟಿಸಿ ಏಕಸ್ವಾಮ್ಯ ಹೊಂದಿದೆ. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಶೇ.20 ಮಾತ್ರ.
ರಾಜ್ಯದ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ಅನುಷ್ಠಾನ ಬಳಿಕ ಜಿಲ್ಲೆಯಲ್ಲಿ ನಿಗಮದ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಆದರೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಜಿಲ್ಲಾಡಳಿತ ಬಸ್ ಸಂಖ್ಯೆ ಹೆಚ್ಚಿಸಲು ಅನುಮತಿ ನೀಡುತ್ತಿಲ್ಲ. ಮಂಗಳೂರಿನಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಯದೆ ವರ್ಷವೇ ಕಳೆಯಿತು. ವಿಶೇಷ ಸಂದರ್ಭಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಂತದಲ್ಲಿಯೇ ಒದಗಿಸಬಹುದಾದ ತಾತ್ಕಾಲಿಕ ಪರವಾನಗಿಯೂ (ಟಿಪಿ) ದೊರೆಯುತ್ತಿಲ್ಲ.

  • ಇತ್ಯರ್ಥವಾಗದ ಅರ್ಜಿ: ಪ್ರಸ್ತುತ 50 ಮಾರ್ಗಗಳಲ್ಲಿ ಬಸ್ ಓಡಿಸಲು ಪರವಾನಗಿ ಕೋರಿ ಕೆಎಸ್‌ಆರ್‌ಟಿಸಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಹಾಕಿರುವ ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಇದೆ. ಅತ್ಯಧಿಕ ಬೇಡಿಕೆ ಇರುವ ಮೂಡುಬಿದಿರೆ ಮಾರ್ಗದಲ್ಲಿ ನಾಲ್ಕು ಬಸ್‌ಗಳಿಗೆ ತಾತ್ಕಾಲಿಕ ಪರವಾನಗಿ ಕೋರಿ ಹಾಕಿರುವ ಅರ್ಜಿಗಳಿಗೂ ಸ್ಪಂದನೆ ಇಲ್ಲ. ಆಶ್ಚರ್ಯವೆಂದರೆ ಜನರ ಬಸ್‌ಗಳ ಬೇಡಿಕೆ ಕುರಿತು ಪ್ರಮುಖ ರಾಜಕೀಯ ಪಕ್ಷಗಳು ಮಾತನಾಡುತ್ತಿಲ್ಲ. ಆದರೆ ಕೆಲವು ಯುವ ಸಂಘಟನೆಗಳು ಕೆಎಸ್‌ಆರ್‌ಟಿಸಿ ನಗರ ಸಾರಿಗೆಗಾಗಿ ಹೋರಾಟ ನಡೆಸುತ್ತಲೇ ಇವೆ. ಪ್ರಸ್ತುತ 37 ನಗರ ಸಾರಿಗೆ ನರ್ಮ್ ಸಹಿತ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ 305 ಬಸ್‌ಗಳಲ್ಲಿ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆ ಸೌಲಭ್ಯ ಪಡೆಯಲು ಅವಕಾಶವಿದೆ.

ಡಿಎಂ ನೋಟಿಫಿಕೇಶನ್ ನೆವ
ವಾಹನ ದಟ್ಟಣೆ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರು ಹಂಪನಕಟ್ಟೆ ಪ್ರದೇಶಕ್ಕೆ 1993ರ ಏಪ್ರಿಲ್ 6ರಂದು ಹೊಸ ಬಸ್ ಪರವಾನಗಿ ನಿರ್ಬಂಧಿಸಿ ಉಭಯ ಜಿಲ್ಲೆಗಳ ದಂಡಾಧಿಕಾರಿಗಳು (ಜಿಲ್ಲಾಧಿಕಾರಿ) ಅಧಿಸೂಚನೆ ಹೊರಡಿಸಿದ್ದರು. ಈ ಅಧಿಸೂಚನೆ ಪ್ರಕಾರ ಮಂಗಳೂರಿನಲ್ಲಿ ಇರುವ ಕೊಟ್ಟಾರ ಕ್ರಾಸ್, ಕೆಪಿಟಿ, ಮಲ್ಲಿಕಟ್ಟೆ, ಕಂಕನಾಡಿ ಪ್ರದೇಶಗಳನ್ನು ದಾಟಿ ಬಸ್‌ಗಳು ನಗರ ಪ್ರವೇಶಿಸಲು, ಹೊಸ ಪರವಾನಗಿ ಒದಗಿಸಲು ಅವಕಾಶವಿಲ್ಲ. ಈಗಾಗಲೇ ಇರುವ ಬಸ್‌ಗಳ ಸಂಚಾರಕ್ಕೆ ಸಮಸ್ಯೆ ಇಲ್ಲ. ಪ್ರಸ್ತಾವಿತ ಅಧಿಸೂಚನೆ ಬಳಿಕ ನಗರದ ಪ್ರಮುಖ ರಸ್ತೆಗಳು ಅಗಲಗೊಂಡಿವೆ. ನಗರದಲ್ಲಿ ಅಧಿಕ ಜನರು ಸಂದರ್ಶಿಸುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಗರದ ಹೊರವಲಯಕ್ಕೆ ಹೋಗಲು ಸಜ್ಜಾಗುತ್ತಿದೆ. ಕಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳು ಓಡಾಡುತ್ತಿವೆ. ಆದರೆ ಅಧಿಸೂಚನೆಯ ನೆಪವೊಡ್ಡಿ ಕೆಎಸ್‌ಆರ್‌ಟಿಸಿ ಹೊಸ ಬಸ್‌ಗಳನ್ನು ಆರಂಭಿಸಲು ಅಡ್ಡಿಪಡಿಸಲಾಗುತ್ತಿದೆ. ಅಂತರ್ ಜಿಲ್ಲಾ ಬಸ್‌ಗಳು ಮಂಗಳೂರು ಬಿಜೈ ಬಸ್ ನಿಲ್ದಾಣ ಪ್ರವೇಶಿಸಬಹುದು, ಮಂಗಳೂರು ನಗರ ಸಾರಿಗೆಗೂ ಇದು ಅವಶ್ಯ.

  • * ಕೆಎಸ್‌ಆರ್‌ಟಿಸಿ ಕೋರಿರುವ ಮಾರ್ಗದಲ್ಲಿ ಪರವಾನಗಿ ಒದಗಿಸಿದರೆ ಬಸ್ ಓಡಿಸಲು ನಾವು ಕೆಎಸ್‌ಆರ್‌ಟಿಸಿ ಕಡೆಯಿಂದ ಸಿದ್ದರಿದ್ದೇವೆ. ತಕ್ಷಣಕ್ಕೆ ಹೊಸ ಬಸ್ ಲಭ್ಯವಾಗದಿದ್ದರೆ ಇತರ ಡಿಪೋಗಳಿಂದ ತರಿಸಿಕೊಳ್ಳಲು ಕೂಡ ಅವಕಾಶವಿದೆ.
  • ರಾಜೇಶ್ ಶೆಟ್ಟಿ
    ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಮಂಗಳೂರು
  • * ಕರಾವಳಿಯ ಜಿಲ್ಲೆಗಳ ಅನೇಕ ಗ್ರಾಮಗಳಿಗೆ ಇಂದಿಗೂ ಕೆಎಸ್‌ಆರ್‌ಟಿಸಿ ಬಸ್ ಇಲ್ಲ. ಶಕ್ತಿ ಯೋಜನೆ ಜಾರಿ ಬಳಿಕ ನಿಗಮದ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಸಂಜೆ ಹೊತ್ತಿನಲ್ಲಿ ನಿಗಮದ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆಯಿಂದ ಮಹಿಳೆಯರು ಮತ್ತೆ ಖಾಸಗಿ ಬಸ್‌ಗಳಿಗೆ ಮೊರೆ ಹೋಗುವ ಪರಿಸ್ಥಿತಿ ಇದೆ.
  • ಜಿ.ಕೆ.ಭಟ್
    ಸಾಮಾಜಿಕ ಕಾರ್ಯಕರ್ತರು, ಮಂಗಳೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net