

ಕೆಜಿಎಫ್- ತಾಲೂಕಿನ ಕೀರ್ತಿಕುಪ್ಪ ಗ್ರಾಮಕ್ಕೆ ಬಸ್ ಸಂಪರ್ಕವಿಲ್ಲದೇ ಶಾಲಾ&ಕಾಲೇಜು ವಿದ್ಯಾರ್ಥಿಗಳು, ವೃದ್ಧರಿಗೆ ತೊಂದರೆಯಾಗಿತ್ತು. ಈ ಬಗ್ಗೆ ಶಾಸಕಿ ರೂಪಕಲಾ ಅವರಿಗೆ ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮಕ್ಕೆ ಬಂದ ಬಸ್ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಸಂಭ್ರಮಾಚರಿಸಿದರು.
ಕೀರ್ತಿಕುಪ್ಪ ಗ್ರಾಪಂ ಸದಸ್ಯೆ ಗಾಯತ್ರಿ ಗಣೇಶ್ ಮಾತನಾಡಿ, ಕಳೆದ 40 ವರ್ಷಗಳಿಂದ ಗ್ರಾಮಕ್ಕೆ ಸರ್ಕಾರಿ ಬಸ್ ಬರದೇ ಇದ್ದುದರಿಂದ ಶಾಲಾ ಮಕ್ಕಳಿಗೆ, ವಯೋವೃದ್ಧರಿಗೆ, ಆಸ್ಪತ್ರೆಗೆ ಹೋಗುವವರಿಗೆ ತೊಂದರೆಯಾಗುತ್ತಿದ್ದು, ಗ್ರಾಮಕ್ಕೆ ಸರ್ಕಾರಿ ಬಸ್ ಬೇಕು ಎಂದು ಶಾಸಕಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಬಸ್ ಬಂದಿದೆ ಎಂದರು.
ಗ್ರಾಮವು ಕರ್ನಾಟಕ ಆಂಧ್ರ ಗಡಿ ಭಾಗದಲ್ಲಿದ್ದು, ಗ್ರಾಮದಲ್ಲಿ 100 ಮನೆಗಳಿವೆ. ಸುಮಾರು 50ಕ್ಕೂ ಹೆಚ್ಚು ಮಕ್ಕಳು ಕ್ಯಾಸಂಬಳ್ಳಿ ಹಾಗೂ ಕೆಜಿಎಫ್ ನಗರಗಳಲ್ಲಿರುವ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು ಬಸ್ ಇಲ್ಲದೇ ಪರದಾಡುವಂತಾಗಿತ್ತು ಎಂದರು.
ಬಸ್ಗೆ ತೆರಳಬೇಕಾದರೆ ಮಕ್ಕಳು ನಿತ್ಯ 1 ಕಿ.ಮಿ ದೂರದಲ್ಲಿರುವ ಬಸ್ ನಿಲ್ದಾಣಕ್ಕೆ ತೆರಳಬೇಕಿತ್ತು. ಮಳೆಗಾಲದಲ್ಲಿ ಮಕ್ಕಳು ಶಾಲೆಗಳಿಗೆ ತೆರಳಲು ಕಷ್ಟವಾಗುತಿತ್ತು. ಗ್ರಾಮದಲ್ಲಿರುವ ವೃದ್ಧರು ಹೆಂಗಸರು ಆಸ್ಪತ್ರೆಗಳಿಗೆ, ಮಾರುಕಟ್ಟೆಗೆ ಹೋಗಲು ಕಷ್ಟವಾಗುತ್ತಿತ್ತು. ಶಾಸಕಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೆಳಗ್ಗೆ ಹಾಗೂ ಸಂಜೆ ಒಂದು ಟ್ರಿಪ್ ಕಳುಹಿಸಬೇಕು ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಆದೇಶ ನೀಡಿದ ಮೇರೆಗೆ ಅಧಿಕಾರಿಗಳು ಬಸ್ ಕಳುಹಿಸಿಕೊಟ್ಟಿದ್ದು ನಮಗೆ ಅನುಕೂಲವಾಗಿದೆ ಎಂದರು.