

ಮಂಗಳೂರು: ಲಾಕ್‌ಡೌನ್‌ನಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿ ಬಾಕಿಯಾಗಿರುವ ವಲಸೆ ಕಾರ್ಮಿಕರು ಶುಕ್ರವಾರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತಮ್ಮ ಸ್ವಂತ ಊರಿಗೆ ಪ್ರಯಾಣ ಆರಂಭಿಸಿದ್ದಾರೆ.
ವಸತಿಗೃಹ, ಹಾಸ್ಟೆಲ್, ಶಾಲೆ ಮುಂತಾದ ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿ ಉಳಿದಿರುವ ವಲಸೆ ಕಾರ್ಮಿಕರು ತಮ್ಮ ಊರು ತಲುಪಲು ಜಿಲ್ಲಾಡಳಿತ ಕರ್ನಾಟಕ ರಾಜ್ಯ ರಸ್ತೆ ಸಂಚಾರ ನಿಗಮದ ಸಹಕಾರದೊಂದಿಗೆ ಈ ವ್ಯವಸ್ಥೆ ಒದಗಿಸುತ್ತಿದೆ. ಮೂಡುಬಿದರೆಯಿಂದ 14 ಮತ್ತು ಪುತ್ತೂರಿನಿಂದ ಮೂರು ಬಸ್‌ಗಳು ಶುಕ್ರವಾರ ಪ್ರಯಾಣ ಆರಂಭಿವೆ. ಮಂಗಳೂರಿನಿಂದ ಸುಮಾರು 15 ಬಸ್‌ಗಳು ಹೊರಡುವ ನಿರೀಕ್ಷೆ ಇದೆ.
100 ಬಸ್ ಬೇಡಿಕೆ: ವಲಸೆ ಕಾರ್ಮಿಕರ ಪ್ರಯಾಣಕ್ಕೆ ಜಿಲ್ಲಾಡಳಿತದಿಂದ 100 ಬಸ್‌ಗಳ ಬೇಡಿಕೆ ಬಂದಿದ್ದು, ತಕ್ಷಣಕ್ಕೆ 80 ಬಸ್ ವ್ಯವಸ್ಥೆಯಾಗಿದೆ. ಜಿಲ್ಲೆಯಲ್ಲೇ ವಾಸ್ತವ್ಯ ಹೊಂದಿರುವ ಬಸ್ ಚಾಲಕರು ಮತ್ತು ನಿರ್ವಾಹಕರು ಬಸ್‌ಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಾಲಕ ಎಚ್.ಎಸ್.ಅರುಣ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಸುರಕ್ಷತಾ ಕ್ರಮ: ಬಸ್‌ಗಳಲ್ಲಿ ಪ್ರಯಾಣಿಸುವ ಕಾರ್ಮಿಕರ ಸುರಕ್ಷತೆಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಪ್ರಯಾಣ ಮೊದಲು ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಯಲಿದೆ. ಎಲ್ಲ ಬಸ್‌ಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್‌ಗಳು ಕಾರ್ಮಿಕರ ಕುಟುಂಬಗಳ ಬಳಕೆಗೆ ಲಭ್ಯವಾಗಲಿದೆ.
ಸಾಮಾಜಿಕ ಅಂತರ: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಒಂದು ಬಸ್‌ನಲ್ಲಿ ಗರಿಷ್ಠ 22 ಪ್ರಯಾಣಿಕರು ಮಾತ್ರ ಸಂಚರಿಸಲು ಅವಕಾಶ ನೀಡಲು ಉದ್ದೇಶಿಸಲಾಗಿದೆ. ಒಂದು ಉದ್ದದ ಆಸನದಲ್ಲಿ ಕೂಡ ಒಬ್ಬರು ಮಾತ್ರ ಪ್ರಯಾಣಿಸಲು ಅವಕಾಶ. 55 ಜನರು ಪ್ರಯಾಣಿಸಬಹುದಾದ ಬಸ್‌ನಲ್ಲಿ ಗರಿಷ್ಠ 22 ಜನ ಮಾತ್ರ ಪ್ರಯಾಣಿಸಲಿದ್ದಾರೆ. ಈ ಬಸ್‌ಗಳು ಬಾಗಲಕೋಟೆ, ಯಾದಗಿರಿ, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ಚಿತ್ರದುರ್ಗ, ಮಂಡ್ಯ ಸಹಿತ ವಲಸೆ ಕಾರ್ಮಿಕರು ವಾಸವಿರುವ ರಾಜ್ಯದ ಎಲ್ಲ ಜಿಲ್ಲೆಗಳನ್ನು ಸಂಪರ್ಕಿಸಲಿವೆ.
ಪೂರ್ಣ ಉಚಿತ: ಕಾರ್ಮಿಕರು ಈ ಪ್ರಯಾಣ ಸೌಲಭ್ಯವನ್ನು ಪೂರ್ಣ ಉಚಿತವಾಗಿ ಪಡೆಯಲಿದ್ದಾರೆ. ಇದರ ವೆಚ್ಚವನ್ನು ಜಿಲ್ಲಾಡಳಿತ ಭರಿಸಲಿದೆ. ಇತರ ಸಾರ್ವಜನಿಕರು ಕೂಡ ಪ್ರಯಾಣಿಸಲು ಮುಂದಾಗಬಹುದು ಎನ್ನುವ ಆತಂಕದಿಂದ ಜಿಲ್ಲಾಡಳಿತ ಈ ಬಸ್‌ಗಳು ಹೊರಡುವ ಬಗ್ಗೆ ಮುಂಚಿತವಾಗಿ ತಿಳಿಸಿಲ್ಲ.
ಉಡುಪಿ 20 ಬಸ್: ಉಡುಪಿ ಜಿಲ್ಲೆಯಲ್ಲೂ ನೂರಾರು ಕಾರ್ಮಿಕರು ಜಿಲ್ಲಾಡಳಿತದ ಆಶ್ರಯದಲ್ಲಿದ್ದು, ಅವರನ್ನು ಊರಿಗೆ ಕಳುಹಿಸಲು ಸಿದ್ಧತೆ ನಡೆದಿದೆ. ಜಿಲ್ಲಾಡಳಿತವು 20 ಬಸ್‌ಗಳಿಗೆ ಬೇಡಿಕೆ ಇಟ್ಟಿದೆ. ಉಡುಪಿ ನಗರ ಮತ್ತು ಇತರ ಪ್ರದೇಶಗಳಿಂದ ಬಸ್‌ಗಳು ಹೊರಡಲಿವೆ. ದಿನಾಂಕ ಮತ್ತು ಸ್ಥಳ ಕುರಿತು ಶನಿವಾರ ಅಂತಿಮ ತೀರ್ಮಾನ ಆಗಲಿದೆ.