ಮೈಸೂರು: ಅನುಕಂಪದ ಆಧಾರ ಮೇಲೆ ಕೆಲಸ ಕಡತವನ್ನು ಮೇಲಾಧಿಕಾರಿಗೆ ಕಳುಹಿಸಲು 10 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ ಕೆಎಸ್‌ಆರ್‌ಟಿಸಿ ಸಹಾಯಕ ಆಡಳಿತಾಧಿಕಾರಿ (ಎಎಒ) ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಗರದ ಬನ್ನಿಮಂಟಪದ ಕೆಎಸ್‌ಆರ್‌ಟಿಸಿ ಕಚೇರಿಯ ಗ್ರಾಮೀಣ ವಿಭಾಗದ ಎಎಒ ಸಿ.ಟಿ.ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದವರು. ಈ ಸಂಬಂಧ ಮಂಡ್ಯದ ಸಂತೋಷ್ ಕುಮಾರ್ ದೂರು ನೀಡಿದ್ದರು. ಸಂತೋಷ್‌ಕುಮಾರ್ ಅವರ ತಂದೆ ಕೆಎಸ್‌ಆರ್‌ಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಅಕಾಲಿಕ ಮರಣಕ್ಕೆ ಒಳಗಾಗಿದ್ದರಿಂದ ಅನುಕಂಪದ ಆಧಾರದ ಮೇಲೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದರು. ಈ ವೇಳೆ ಅರ್ಜಿಯನ್ನು ಮೇಲಧಿಕಾರಿಗಳಿಗೆ ರವಾನಿಸಲು ಮಂಜುನಾಥ್ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ.
ಈ ಬಗ್ಗೆ ಸಂತೋಷ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಬುಧವಾರ ಸಂಜೆ ಮಂಜುನಾಥ್, ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದರು. ಈ ಹಿಂದೆಯೂ ಈತನನ್ನು ದುರ್ವತನೆ ನಡವಳಿಕೆಯಿಂದ ಇಲಾಖೆಯಿಂದ ಅಮಾನತು ಮಾಡಲಾಗಿತ್ತು ಎನ್ನಲಾಗಿದೆ.