ವಿರಾಜಪೇಟೆಯಲ್ಲಿ ನೂತನ 8 ಬಸ್ ಮಾರ್ಗಗಳಿಗೆ ಚಾಲನೆ

ksrtc
Published on

ವಿರಾಜಪೇಟೆ:

ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪ್ರಯಾಣಿಕರ ಅನುಕೂಲಕ್ಕೋಸ್ಕರ ನೂತನ ಬಸ್ ಮತ್ತು ಬಸ್ ಮಾರ್ಗಗಳಲ್ಲಿ ಒದಗಿಸಿಕೊಡಲಾಗಿದೆ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ವಿರಾಜಪೇಟೆ ನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ನೂತನವಾಗಿ ಆರಂಭಿಸಲಾದ 8 ಹೊಸ ಮಾರ್ಗಗಳು ಮತ್ತು 8 ಹೊಸ ಬಸ್‌ಗಳ ಸಂಚಾರ ಉದ್ಘಾಟಿಸಿ ಮಾತನಾಡಿದರು.

ವೇಗವಾಗಿ ಬೆಳೆಯುತ್ತಿರುವ ವಿರಾಜಪೇಟೆ ಪುರಸಭೆ ವ್ಯಾಪ್ತಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು, ಏರಿಕೆಯಾಗಿರುವ ಪ್ರಯಾಣಿಕರ ಸಂಖ್ಯೆಗನುಗುಣವಾಗಿ ನೂತನ ಬಸ್ ಮಾರ್ಗಗಳು ಮತ್ತು ಈ ಮಾರ್ಗಕ್ಕೆ ಹೆಚ್ಚುವರಿಯಾಗಿ ಎಂಟು ಹೊಸ ಬಸ್‌ಗಳನ್ನು ಒದಗಿಸಲಾಗಿದೆ. ಆಧುನಿಕತೆ ಮತ್ತು ನಗರೀಕರಣ ವೃದ್ಧಿಯಾದಂತೆಲ್ಲ ಜನಸಂದಣಿ ಜಾಸ್ತಿಯಾಗುವುದನ್ನು ಮನಗಂಡು ಪ್ರಯಾಣಿಕರ ಅನುಕೂಲಕ್ಕಾಗಿ ಈ ಹೊಸ ಮಾರ್ಗಗಳನ್ನು ಹಾಗೂ ಸುಸೂತ್ರವಾಗಿ ಪ್ರಯಾಣಿಸಲು ಹೊಸ ಬಸ್‌ಗಳನ್ನು ಈ ಭಾಗಕ್ಕೆ ಕಲ್ಪಿಸಲಾಗಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು.

ಬಸ್ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸಂಸ್ಥೆಗೆ ಒಳ್ಳೆಯ ಹೆಸರು ತರುವಲ್ಲಿ ಶ್ರಮಿಸಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಉಚಿತ ಬಸ್ ಸೌಲಭ್ಯ ಕಲ್ಪಿಸಿದ್ದು ಇದರಿಂದ ನಾಡಿನ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ ಎಂದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಅಧ್ಯಕ್ಷ ಜಾನ್ಸನ್, ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ಪುರಸಭೆ ಉಪಾಧ್ಯಕ್ಷೆ ಫಸಿಯಾ ತಬ್ಸುಂ ಸದಸ್ಯರು, ತಾಲೂಕು ತಹಸೀಲ್ದಾರ್ ಪ್ರವೀಣ್, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net