ಸಾರಿಗೆ ಬಸ್ ಪ್ರಯಾಣಿಕರಿಂದ ಡಿಜಿಟಲ್ ಪಾವತಿ

ksrtc (2)
Published on

ಮಡಿಕೇರಿ:

ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಪರಿಚಯಿಸಿರುವ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸುವ ಸೌಲಭ್ಯಕ್ಕೆ ಹೆಚ್ಚಿನ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದೊಂದು ಉತ್ತಮ ಪರಿಕಲ್ಪನೆ ಆಗಿದ್ದರೂ ಕೊಡಗಿನಂಥ ಗುಡ್ಡಗಾಡು ಪ್ರದೇಶದಲ್ಲಿ ನಿರೀಕ್ಷಿತ ಪ್ರಯೋಜನ ಆಗುತ್ತಿಲ್ಲ. ನೆಟ್‌ವರ್ಕ್ ಸಮಸ್ಯೆಯಿಂದಾಗಿ ಹಣ ಕೊಟ್ಟು ಟಿಕೆಟ್ ಪಡೆದುಕೊಳ್ಳುವ ಸ್ಥಿತಿಯೇ ಈಗಲೂ ಬಹುತೇಕ ಕಂಡುಬರುತ್ತಿದೆ.

ಬದಲಾದ ಕಾಲಮಾನಕ್ಕೆ ತಕ್ಕಂತೆ ಆಧುನಿಕತೆಯನ್ನು ಅಳಡಿಸಿಕೊಂಡು ಮುಂದುವರಿಯುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದೇಶದಲ್ಲೇ ಉತ್ತಮ ಹೆಸರು ಮಾಡಿದೆ. ಬೇರೆ ರಾಜ್ಯಗಳಲ್ಲಿ ಈಗಲೂ ಸಾಂಪ್ರದಾಯಿಕ ಟಿಕೆಟ್ ಪದ್ಧತಿ ಇದ್ದರೂ ದಶಕದ ಹಿಂದೆಯೇ ಎಲೆಕ್ಟಾçನಿಕ್ ಟಿಕೆಟ್ ಮೆಷಿನ್ ಬಳಸುವ ಮೂಲಕ ಕೆಎಸ್‌ಆರ್‌ಟಿಸಿ ತಂತ್ರಜ್ಞಾನ ಬಳಕೆಯಲ್ಲಿ ತಾನು ಸಾಕಷ್ಟು ಮುಂದೆ ಇರುವುದನ್ನು ತೋರಿಸಿಕೊಂಡಿತ್ತು. ನಂತರ ಇಂದಿನ ಕ್ಯಾಷ್‌ಲೆಸ್ ಯುಗದಲ್ಲಿ ಪ್ರಯಾಣಿಕರ ಆಶಯಕ್ಕೆ ಪೂರಕವಾಗಿ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸುವ ಸೌಲಭ್ಯವನ್ನೂ ಕೆಲವು ತಿಂಗಳ ಹಿಂದೆ ಪರಿಚಯಿಸಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಸಾಮಾನ್ಯವಾಗಿ ಬಸ್‌ಗಳಲ್ಲಿ ನಿರ್ವಾಹಕರು ಮತ್ತು ಪ್ರಯಾಣಿಕರ ಮಧ್ಯೆ ಜಗಳ ಹುಟ್ಟಿಕೊಳ್ಳಲು ಪ್ರಮುಖ ಕಾರಣವೇ ಚಿಲ್ಲರೆ ಸಮಸ್ಯೆ. ಇಂಥ ಚಿಲ್ಲರೆ ಸಮಸ್ಯೆಗೆ ಮುಕ್ತಿ ಹಾಡುವ ದೊಡ್ಡ ನಿರೀಕ್ಷೆಯೊಂದಿಗೆ ಕೆಎಸ್‌ಆರ್‌ಟಿಸಿಯಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸುವ ಸೌಲಭ್ಯ ಆರಂಭವಾಗಿತ್ತು. ಜೇಬಿನಲ್ಲಿ ಹಣ ಇಟ್ಟುಕೊಂಡು ಪಿಕ್‌ಪಾಕೆಟ್ ಭಯದೊಂದಿಗೆ ಸಂಚರಿಸಬೇಕಾಗಿದ್ದ ಅನಿವಾರ್ಯತೆಗೂ ಈ ಸೌಲಭ್ಯದಿಂದ ಮುಕ್ತಿ ಸಿಗುತ್ತದೆ ಎಂದು ಪ್ರಯಾಣಿಕರೂ ಖುಷಿಪಟ್ಟಿದ್ದರು. ಚಿಲ್ಲರೆ ಕೊಡುವ ತಲೆನೋವು ತಪ್ಪುತ್ತದೆ ಎಂದು ಕಂಡಕ್ಟರ್‌ಗಳೂ ನಿರಾಳವಾಗಿದ್ದರು.

ಹೊಸ ಯೋಜನೆಗಳು ಜಾರಿಗೆ ಬಂದಾಗ ಸಕರಾತ್ಮಕ ಅಂಶಗಳು ಇರುವಂತೆ ನಕರಾತ್ಮಕ ಅಂಶಗಳೂ ಕಂಡುಬರುತ್ತದೆ. ಯೋಜನೆಗಳಲ್ಲಿ ಜನಸಾಮಾನ್ಯರು ಹೆಚ್ಚಾಗಿ ತೊಡಗಿಸಿಕೊಂಡಾಗ ನಕರಾತ್ಮಕ ಅಂಶಗಳಿಗೆ ಪರಿಹಾರ ಲಭ್ಯವಾಗಿ ಸಕರಾತ್ಮಕ ಅಂಶಗಳು ಉಳಿದುಕೊಂಡು ಯೋಜನೆ ಯಶಸ್ವಿ ಆಗುತ್ತದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸುವ ಸೌಲಭ್ಯದಲ್ಲೂ ಇಂಥ ಹಲವು ಸಮಸ್ಯೆಗಳು ಕಂಡುಬರುತ್ತಿದ್ದು, ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಕೊಡಗಿನಂಥ ಗುಡ್ಡಗಾಡು ಪ್ರದೇಶಗಳಲ್ಲಿ ಈ ಸೌಲಭ್ಯದ ಯಶಸ್ಸಿಗೆ ಸವಾಲು ಹಾಕುತ್ತಿದೆ.

ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸುವ ವ್ಯವಸ್ಥೆಗಾಗಿ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್‌ಗಳಿಗೆ ವಿಶೇಷವಾದ ಟಚ್‌ಸ್ಕಿçÃನ್ ಎಲೆಕ್ಟಾçನಿಕ್ ಟಿಕೆಟ್ ಮೆಷಿನ್ ಕೊಡಲಾಗಿದೆ. ಈ ಯಂತ್ರಗಳಲ್ಲಿ ನಿರ್ವಾಹಕರು ಪ್ರಯಾಣಿಕರ ಪ್ರಯಾಣದ ವಿವರ, ಎಲ್ಲಿಂದ ? ಎಲ್ಲಿಗೆ ಎಂದು ದಾಖಲಿಸುತ್ತಿದ್ದಂತೆಯೇ, ಪ್ರಯಾಣಿಕರು ವಯಸ್ಕರೋ ? ಮಕ್ಕಳೋ ಎಂದು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಭರ್ತಿ ಮಾಡಿದ ನಂತರ ಟಿಕೆಟ್ ಮೊತ್ತ, ಟಿಕೆಟ್‌ಗೆ ಹಣ ಪಾವತಿಸುವ ಆಯ್ಕೆ ಕೇಳಲಾಗುತ್ತದೆ. ಇಲ್ಲಿ ಕ್ಯಾಷ್ ಮತ್ತು ಡಿಜಿಟಲ್ ಪಾವತಿ ಆಯ್ಕೆ ಇರುತ್ತದೆ. ಡಿಜಿಟಲ್ ಪಾವತಿ ಆಯ್ಕೆ ಮಾಡಿಕೊಂಡರೆ ಎಲೆಕ್ಟಾçನಿಕ್ ಟಿಕೆಟ್ ಮೆಷಿನ್‌ನಲ್ಲಿ ಕ್ಯೂಆರ್ ಕೋಡ್ ಕಾಣಿಸಿಕೊಳ್ಳುತ್ತದೆ. ಪ್ರಯಾಣಿಕ ಇದನ್ನು ತನ್ನ ಮೊಬೈಲ್‌ನಲ್ಲಿ ಸ್ಕಾö್ಯನ್ ಮಾಡಿಕೊಳ್ಳುವ ಮೂಲಕ ಡಿಜಿಟಲ್ ಪಾವತಿ ಮಾಡಬಹುದು. ಫೋನ್ ಪೇ, ಗೂಗಲ್ ಪೇ, ಭೀಮ್, ಯಪಿಐ ಪಾವತಿಗೆ ಈ ಯಂತ್ರದಲ್ಲಿ ಅವಕಾಶ ಇದೆ.

ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸುವ ವ್ಯವಸ್ಥೆ ಸರಳವಾಗಿ ಕಂಡುಬAದರೂ ಈ ಸಂಪೂರ್ಣ ವ್ಯವಸ್ಥೆ ನಿಂತಿರುವುದು ಮೊಬೈಲ್ ನೆಟ್‌ವರ್ಕ್ ಮೇಲೆ. ಮೊಬೈಲ್ ನೆಟ್‌ವರ್ಕ್ ಸಿಗ್ನಲ್ ಸ್ವಲ್ಪ ದುರ್ಬಲ ಆದರೂ ಈ ವ್ಯವಸ್ಥೆ ಏರುಪೇರಾಗಿಬಿಡುತ್ತದೆ. ಕೊಡಗಿನಲ್ಲಿ ಈಗ ಆಗುತ್ತಿರುವುದೂ ಇದೆ. ಜಿಲ್ಲೆಯ ನಗರ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಾಕಷ್ಟು ಮಟ್ಟಿಗೆ ಚೆನ್ನಾಗಿದೆ. ಆದರೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ 2ಜಿ ನೆಟ್‌ವರ್ಕ್ ಸಿಕ್ಕಿದರೆ ಅದೇ ದೊಡ್ಡದು ಎನ್ನುವ ಪರಿಸ್ಥಿತಿ ಇದೆ. ಇದರಿಂದಾಗಿ ರಾಷ್ಟಿçÃಯ ಹೆದ್ದಾರಿ 275ರ ಕುಶಾಲನಗರ-ಮಡಿಕೇರಿ ಮಾರ್ಗ ಒಳಗೊಂಡAತೆ ಜಿಲ್ಲೆಯ ಬಹುತೇಕ ಮಾರ್ಗಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ನಿರ್ವಾಹಕ ಮತ್ತು ಪ್ರಯಾಣಿಕ ಇಬ್ಬರಿಗೂ ದೊಡ್ಡ ಸವಾಲಾಗಿದೆ.

ನೆಟ್‌ವರ್ಕ್ ಸಮಸ್ಯೆ ಮಾತ್ರ ಡಿಜಿಟಲ್ ಪಾವತಿ ವ್ಯವಸ್ಥೆಗೆ ಕಾಡುವುದಿಲ್ಲ. ಇದರ ಜತೆಗೆ ಸರ್ವರ್ ಸಮಸ್ಯೆಯೂ ಆಗಾಗ್ಗೆ ತಲೆ ನೋವು ತಂದಿಡುವುದು ಇದೆ. ನೆಟ್‌ವರ್ಕ್ ಮತ್ತು ಸರ್ವರ್ ಸಮಸ್ಯೆಯಿಂದಾಗಿ ಕೆಲವೊಮ್ಮೆ ಒಬ್ಬ ಪ್ರಯಾಣಿಕನ ಡಿಜಿಟಲ್ ಪಾವತಿ ಪ್ರಕ್ರಿಯೆ ಮುಗಿದು ಟಿಕೆಟ್ ಕೊಡಲು 5 ನಿಮಿಷಗಳಷ್ಟು ಕಾಲಾವಕಾಶ ಬೇಕಾಗುತ್ತದೆ. ಈಗಂತೂ ಎಲ್ಲಾ ಬಸ್‌ಗಳಲ್ಲೂ ಪ್ರಯಾಣಿಕರ ದಟ್ಟಣೆ ಹೆಚ್ಚು ಇದ್ದು, ಎಲ್ಲರೂ ಡಿಜಿಟಲ್ ಪಾವತಿಗೆ ಮುಂದಾದರೆ ಟಿಕೆಟ್ ಕೊಟ್ಟು ಮುಗಿಯುವಾಗ ನಿರ್ವಾಹಕ ನಿಟ್ಟುಸಿರು ಬಿಡುವಂತಾಗಿರುತ್ತದೆ. ಗ್ರಾಮಾಂತರ ಸಾರಿಗೆಗಳಲ್ಲಿ ಇಂಥ ಪರಿಸ್ಥಿತಿ ಎದುರಾದರೆ ಈ ರೀತಿ ಟಿಕೆಟ್ ಕೊಟ್ಟಾಗುವಾಗ ಮತ್ತೊಂದು ಸ್ಟೇಜ್ ಬಂದಾಗಿರುತ್ತದೆ.

ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳೂ ಈ ವ್ಯವಸ್ಥೆಯಲ್ಲಿ ಕಂಡುಬರುತ್ತದೆ. ಎಲೆಕ್ಟಾçನಿಕ್ ಟಿಕೆಟ್ ಮೆಷಿನ್ ಮೂಲಕ ಕ್ಯೂಆರ್ ಕೋಡ್ ಸ್ಕಾö್ಯನ್ ಮಾಡಿ ಪ್ರಯಾಣಿಕ ಬ್ಯಾಂಕ್ ಖಾತೆಯಿಂದ ಹಣ ಕಡಿತವಾದರೂ ಟಿಕೆಟ್ ಬಾರದಿರುವ ಸಾಕಷ್ಟು ಘಟನೆಗಳು ವರದಿ ಆಗಿದೆ. ಆಗ ಪ್ರಯಾಣಿಕ ನಿರ್ವಾಹಕನ ಜತೆಗೆ ಜಗಳಕ್ಕೆ ಇಳಿಯುತ್ತಾನೆ. ಅಥವಾ ಅನಿವಾರ್ಯವಾಗಿ ಮತ್ತೊಮ್ಮೆ ಹಣ ಪಾವತಿಸಿ ಟಿಕೆಟ್ ಪಡೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಗ್ರಾಹಕನ ಖಾತೆಯಿಂದ ಪೇಮೆಂಟ್ ತಡವಾಗುವುದೂ ಇದೆ.

ಡಿಜಿಟಲ್ ಪಾವತಿ ವೇಳೆ ನೆಟ್‌ವರ್ಕ್ ಮತ್ತು ಸರ್ವರ್ ಸಮಸ್ಯೆ ಸದ್ಯಕ್ಕಂತೂ ಪರಿಹಾರ ಆಗುವ ಲಕ್ಷಣಗಳು ಇಲ್ಲ. ಹಾಗಾಗಿ ಇದರಿಂದ ಪಾರಾಗಲು ನಿರ್ವಾಹಕರೇ ಸದ್ಯದ ಮಟ್ಟಿಗೆ ತಾತ್ಕಾಲಿಕ ಪರಿಹಾರ ಕಂಡುಕೊAಡಿದ್ದಾರೆ. ಸಾಮಾನ್ಯವಾಗಿ ಬಸ್‌ನಿಲ್ದಾಣಗಳಲ್ಲಿ ಮೊಬೈಲ್ ನೆಟ್‌ವರ್ಕ್ ಉತ್ತಮವಾಗಿರುವುದರಿಂದ ಡಿಜಿಟಲ್ ಪಾವತಿ ಮಾಡುವವರಿಗೆ ಬಸ್‌ನಿಲ್ದಾಣಗಳಲ್ಲಿ ಮೊದಲು ಟಿಕೆಟ್ ಕೊಡುತ್ತಾರೆ. ನಂತರ ನಗದು ಪಾವತಿ ಮಾಡುವವರಿಗೆ ಟಿಕೆಟ್ ಕೊಡುವುದನ್ನು ಶುರು ಮಾಡಿದ್ದಾರೆ. 'ಸರಿಯಾದ ಚಿಲ್ಲರೆ ಕೊಟ್ಟು ಸಹಕರಿಸಿ' ಎನ್ನುತ್ತಿದ್ದ ನಿರ್ವಾಹಕರು ಈಗ 'ಸ್ಕಾö್ಯನ್ ಮಾಡುವವರು ಮೊದಲು ಟಿಕೆಟ್ ತಗೊಳಿ' ಎನ್ನುವುದಕ್ಕೆ ಶುರುಮಾಡಿದ್ದಾರೆ.

ಡಿಜಿಟಲ್ ವ್ಯವಸ್ಥೆ ಮೂಲಕ ಪಾವತಿ ಮಾಡುವುದನ್ನು ಕೆಎಸ್‌ಆರ್‌ಟಿಸಿ ಪರಿಚಯಿಸಿರುವುದು ಉತ್ತಮ ಬೆಳವಣಿಗೆ. ಆಧುನಿಕ ದಿನಗಳ ಬೇಡಿಕೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ಸ್ಪಂದಿಸುತ್ತಿದೆ. ಆದರೆ ಕೊಡಗಿನಲ್ಲಿ ಡಿಜಿಟಲ್ ಪಾವತಿ ವ್ಯಸ್ಥೆಗೆ ಸ್ವಲ್ಪ ಹಿನ್ನಡೆ ಆಗಿದೆ. ಇಲ್ಲಿ ನೆಟ್‌ವರ್ಕ ಸಮಸ್ಯೆ ಇರುವುದೇ ಇದಕ್ಕೆ ಕಾರಣ. ಎಲ್ಲಾ ಕಡೆಗಳಲ್ಲಿ ನೆಟ್‌ವರ್ಕ ಉತ್ತಮವಾದರೆ ಕೆಎಸ್‌ಆರ್‌ಟಿಸಿಯಲ್ಲಿ ಕ್ಯಾಷ್‌ಲೆಸ್ ಪ್ರಯಾಣ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಒದಗಿಸಲಿದೆ.

ಲತೀಶ್ ಪೂಜಾರಿ, ಮಡಿಕೇರಿ ನಿವಾಸಿ

ಪ್ರಯಾಣಿಕರು ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಸಂಸ್ಥೆ ಪರಿಚಯಿಸಿದಾಗ ನಮಗೆಲ್ಲಾ ಖುಷಿ ಆಗಿತ್ತು. ಚಿಲ್ಲರೆ ಸಮಸ್ಯೆಗೆ ಈಗಲಾದರೂ ಮುಕ್ತಿ ಸಿಕ್ಕಿತಲ್ಲ ಎನ್ನುವಂತಾಗಿತ್ತು. ಆರಂಭದಲ್ಲಿ ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಕಷ್ಟವಾದರೂ ಈಗ ಸುಲಭ ಆಗಿದೆ. ಆದರೆ ಕೊಡಗಿನಲ್ಲಿ ನೆಟ್‌ವರ್ಕ್ ಮತ್ತು ಸರ್ವರ್ ಸಮಸ್ಯೆ ನಮಗೆ ಸವಾಲಾಗಿದೆ. ಕೆಲವೊಮ್ಮೆ ಪ್ರಯಾಣಿಕರ ಹಣ ಕಟ್ ಆದರೂ ನಮಗೆ ಅದು ತೋರಿಸದೇ ಟಿಕೆಟ್ ಬರುವುದಿಲ್ಲ.

ಹೆಸರು ಹೇಳಲು ಇಚ್ಛಿಸದ ನಿರ್ವಾಹಕ, ಮಡಿಕೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net