

ಕುಶಾಲನಗರ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಡಿಕೇರಿ ವಿಭಾಗೀಯ ಕಚೇರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ. ಮಂತರ್ ಗೌಡ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಡಿಕೇರಿ ಡಿಪೋ ನೌಕರರ ಸಂಘದ ಪದಾಧಿಕಾರಿಗಳು ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಕೊಡಗು ಜಿಲ್ಲೆಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹಾಗೂ ಹಳ್ಳಿಗಾಡು ಪ್ರದೇಶಗಳಿಗೆ ಹೆಚ್ಚಿನ ಸಾರಿಗೆ ಬಸ್ ಕಲ್ಪಿಸಲು ಅನುಕೂಲ ಆಗುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ಪ್ರಾದೇಶಿಕ ಸಾರಿಗೆ ವಿಭಾಗದಿಂದ ಮಡಿಕೇರಿ ಡಿಪೋ ಅನ್ನು ಬೇರ್ಪಡಿಸಿ ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕವಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರಾದೇಶಿಕ ಕಚೇರಿ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಕುಶಾಲನಗರ ತಾಲೂಕು ಡಿಪೋದೊಂದಿಗೆ ಕಾರ್ಯಾಗಾರ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಕುಮಾರಸ್ವಾಮಿ ಮನವಿ ಮಾಡಿದರು. ಅದೇ ರೀತಿ ಕುಶಾಲನಗರದಲ್ಲಿ ಜಿಲ್ಲೆಯ ಎರಡನೇ ಸಾರಿಗೆ ಡಿಪೋ ಹಾಗೂ ಶನಿವಾರಸಂತೆಯಲ್ಲಿ ನೂತನ ಬಸ್ ನಿಲ್ದಾಣದ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಿರುವ ಶಾಸಕರಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಡಿಕೇರಿ ಡಿಪೋ ನೌಕರರ ಸಂಘದ ಪದಾಧಿಕಾರಿಗಳಾದ ಮ್ಯಾಕ್ಸ್ ಬ್ರೋನಿ, ಕೆ.ಡಿ.ಪೃಥ್ವಿ ಕುಮಾರ್, ಬಿ.ಎಂ. ಬಸವರಾಜು, ಸದಾಶಿವ, ಪ್ರವೀಣ್ ಕುಮಾರ್, ರಾಮಚಂದ್ರ ಇದ್ದರು.