

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ತ್ಯಾಜ್ಯವನ್ನು ತಂದು ರಾಶಿ ಹಾಕುವ ಕಾರವಾರ ರಸ್ತೆಯಲ್ಲಿನ ಡಂಪಿಂಗ್ ಯಾರ್ಡ್ (ಹೇಸಿಗೆ ಮಡ್ಡಿ)ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಅವೈಜ್ಞಾನಿಕವಾಗಿ ನಡೆಸುತ್ತಿರುವ ತ್ಯಾಜ್ಯ ವಿಲೇವಾರಿಯಿಂದ ಸುತ್ತಮುತ್ತಲಿನ ಪರಿಸರದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಸಿಗೆ ಮಡ್ಡಿ ತೆರವು ಹೋರಾಟ ಸಮಿತಿಯು ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರುದ್ಧ, ಮಂಡಳಿಗೆ ದೂರು ನೀಡಿತ್ತು.
ದೂರಿನ ಅನ್ವಯ ಮಂಡಳಿಯ ಬೆಳಗಾವಿ ವಿಭಾಗೀಯ ಅಧಿಕಾರಿ ಗೋಪಾಲಕೃಷ್ಣ ಸಣ್ಣತಂಗಿ, ಜಿಲ್ಲಾಧಿಕಾರಿ ಜಗದೀಶ ಹಾಗೂ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಹೋರಾಟ ಸಮಿತಿಯ ಅಧ್ಯಕ್ಷ ನಾಗರಾಜ ಗೌರಿ, ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮಲ್ಲಿಕಾರ್ಜುನ ಬಿ.ಎಂ., ಇತರರು ಇದ್ದರು.
ಡಂಪಿಂಗ್ ಯಾರ್ಡ್ ಸುತ್ತಲೂ ತಡೆಗೋಡೆ (ಕಂಪೌಂಡ್) ಇಲ್ಲದಿರುವುದು, ಪ್ರತಿ ನಿತ್ಯ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿರುವುದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ಈ ಕುರಿತು ವರದಿಯನ್ನು ಅಧರಿಸಿ ಪಾಲಿಕೆಗೆ ನೋಟಿಸ್ ನೀಡಲಾಗುವುದು. ಹೇಸಿಗೆ ಮಡ್ಡಿಯಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಪಾರಂಪರಿಕ ತ್ಯಾಜ್ಯ ಕರಗಿಸಲು ರೂಪಿಸಲಾದ ಯೋಜನೆಯ ಟೆಂಡರ್ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಹಂತದಲ್ಲಿದೆ ಎಂದು ಪಾಲಿಕೆ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ ಎಂದು ಗೋಪಾಲಕೃಷ್ಣ ಸಣ್ಣತಂಗಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.