ಸಂಗೀತ ವಿಶ್ವವಿದ್ಯಾಲಯದೊಂದಿಗೆ ಕೆಎಸ್ಒಯು ಒಡಂಬಡಿಕೆ

mysore
Published on

ಮೈಸೂರು: ಶೈಕ್ಷಣಿಕ ಚಟುವಟಿಕೆ ವಿಸ್ತರಣೆಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಜತೆಗೆ ದೆಹಲಿಯ ಜೆಎನ್‌ಯು, ಎನ್‌ಸಿವಿಇಟಿಯೊಂದಿಗೂ ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.


ಮುಕ್ತಗಂಗೋತ್ರಿಯಲ್ಲಿ ಶುಕ್ರವಾರ ಸಂಗೀತ ವಿವಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು.


ಬಳಿಕ ಮಾತನಾಡಿದ ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರು, ಶೈಕ್ಷಣಿಕ ಕಾರ್ಯಕ್ರಮಗಳನ್ನು ಉತ್ತೇಜಿಸುವ ಗುರಿಯೊಂದಿಗೆ ಸಂಗೀತ ವಿವಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ವಿನಿಮಯವನ್ನು ಸುಲಭಗೊಳಿಸುತ್ತದೆ ಎಂದು ತಿಳಿಸಿದರು.


ಈ ಒಡಂಬಡಿಕೆಯು ವೈವಿಧ್ಯಮಯ ಶೈಕ್ಷಣಿಕ ವಿಭಾಗಗಳನ್ನು ಸಂಯೋಜಿಸಲು ಮತ್ತು ಸಮಗ್ರ ಶಿಕ್ಷಣವನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ. ಮೂಲಸೌಕರ್ಯ ಬಳಕೆಯನ್ನು ಉತ್ತಮಗೊಳಿಸುವುದರೊಂದಿಗೆ ಜಂಟಿ ಕಾರ್ಯಾಗಾರ, ವಿಚಾರಗೋಷ್ಠಿ, ಸಮ್ಮೇಳನ ಆಯೋಜಿಸಲಾಗುತ್ತದೆ ಎಂದರು.


ವಿದೇಶಿ ಭಾಷಾ ಶಿಕ್ಷಣದಲ್ಲಿ ಉತ್ಕೃಷ್ಟತೆಗೆ ಹೆಸರಾಗಿರುವ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು)ಯೊಂದಿಗೆ ಒಡಂಬಡಿಕೆಗೂ ಸಿದ್ಧವಾಗಿದೆ. ಈ ಸಂಬಂಧ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಜೆಎನ್‌ಯು ಸಹ ಒಡಂಬಡಿಕೆಗೆ ತಾತ್ವಿಕವಾಗಿ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.


ಆರಂಭದಲ್ಲಿ ಸ್ಪಾೃನಿಷ್, ಫ್ರೆಂಚ್, ಜರ್ಮನ್ ಭಾಷೆಗಳನ್ನು ಪರಿಚಯಿಸಲಾಗುತ್ತದೆ. 9 ವಿದೇಶಿ ಭಾಷಾ ವಿಷಯಗಳಿಗೆ 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗುತ್ತದೆ. ಮುಂದಿನ ತಿಂಗಳ ಅಂತ್ಯದ ವೇಳೆಗೆ ಅಧಿಕೃತ ಎಂಒಯುಗೆ ಸಹಿ ಹಾಕಲಾಗುವುದು. ಇದು ದೂರ ಮತ್ತು ಆನ್‌ಲೈನ್ ಕಲಿಕೆಯ ಮೂಲಕ ಭಾಷಾ ಶಿಕ್ಷಣವನ್ನು ಹೆಚ್ಚಿಸುವ ಮಹತ್ವದ ಒಪ್ಪಂದವಾಗಿದೆ ಎಂದರು.


ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯೊಂದಿಗೆ(ಎನ್‌ಸಿವಿಇಟಿ) ಸಹ ಪಾಲುದಾರಿಕೆ ಹೊಂದಲಿದೆ. ಒಡಂಬಡಿಕೆ ಪ್ರಕಾರ ವಿವಿಧ ಕೌಶಲ ಅಭಿವೃದ್ಧಿ ಕೋರ್ಸ್ ಶುರು ಮಾಡಲು ಅವಕಾಶ ಇದೆ. ಈಗಾಗಲೇ ಪೂರ್ವಭಾವಿ ಸಭೆಗಳು ಪೂರ್ಣಗೊಂಡಿದ್ದು, ಎಂಒಯು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ.

ಈ ಉಪಕ್ರಮದಿಂದ ಕೌಶಲ ಅಭಿವೃದ್ಧಿ ಕ್ಷೇತ್ರಕ್ಕೆ ಗಣನೀಯ ಕೊಡುಗೆ ದೊರಕಲಿದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ವೃತ್ತಿಪರ ತರಬೇತಿ ಮತ್ತು ಪ್ರಮಾಣಪತ್ರ ದೊರೆಯಲಿದೆ ಎಂದರು.

ಮುಕ್ತ ವಿವಿ ಆಡಳಿತಾತ್ಮಕ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್, ಪರೀಕ್ಷಾಂಗ ಕುಲಸಚಿವ ಎಚ್.ವಿಶ್ವನಾಥ್, ಡೀನ್ ಪ್ರೊ.ಲಕ್ಷ್ಮೀ, ಸಂಗೀತ ವಿವಿ ಕುಲಸಚಿವೆ ಕೆ.ಎಸ್.ರೇಖಾ ಇತರರಿದ್ದರು.

ಕೆಎಸ್‌ಒಯುನಲ್ಲಿ 63 ಸಾವಿರ ವಿದ್ಯಾರ್ಥಿಗಳು ಕಲಿಕೆ


ಮುಕ್ತ ವಿವಿಯಲ್ಲಿ ಹಾಲಿ 63 ಸಾವಿರ ವಿದ್ಯಾರ್ಥಿಗಳಿದ್ದಾರೆ. ಪ್ರವೇಶಾತಿ ಸಂಖ್ಯೆಯನ್ನು 1 ಲಕ್ಷಕ್ಕೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಪ್ರೊ.ಶರಣಪ್ಪ ವಿ.ಹಲಸೆ ತಿಳಿಸಿದರು.


ಜನವರಿ ಆವೃತ್ತಿಯಲ್ಲಿ 18 ಸಾವಿರ, ಜುಲೈ ಆವೃತ್ತಿಯಲ್ಲಿ 25 ಸಾವಿರ ಸೇರಿದಂತೆ 2023ರಲ್ಲಿ 43 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2024ರ ಜನವರಿ ಆವೃತ್ತಿಯಲ್ಲಿ 17,808 ವಿದ್ಯಾರ್ಥಿಗಳು ದಾಖಲಾಗಿದ್ದು, ಜುಲೈ ಆವೃತ್ತಿ ಪ್ರವೇಶ ಪ್ರಕ್ರಿಯೆ ಶುರುವಾಗಬೇಕಿದೆ ಎಂದರು.


ದೂರ ಶಿಕ್ಷಣ ಕಲಿಕೆಯಲ್ಲಿ ದೇಶದಲ್ಲೇ ಅತಿ ಹೆಚ್ಚು ಶೈಕ್ಷಣಿಕ ಕೋರ್ಸ್‌ಗಳನ್ನು ಮುಕ್ತ ವಿವಿ ಹೊಂದಿದೆ. 55 ಕೋರ್ಸ್‌ಗಳು, 10 ಆನ್‌ಕೋರ್ಸ್‌ಗಳು ನಡೆಸಲಾಗುತ್ತಿದೆ. ದೇಶದಲ್ಲಿ ದೂರ ಶಿಕ್ಷಣ ಕ್ಷೇತ್ರದ 17 ವಿಶ್ವವಿದ್ಯಾಲಯಗಳಿವೆ. ಈ ಪೈಕಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಬಿಟ್ಟರೆ ಅತಿ ಹೆಚ್ಚು ಕೋರ್ಸ್ ನಡೆಸುತ್ತಿರುವುದು ಮುಕ್ತ ವಿವಿ ಮಾತ್ರ ಎಂದರು.

ಯುಜಿಸಿ ಮಾನ್ಯತೆಗಾಗಿ ಪ್ರಯತ್ನ

2013-14 ಮತ್ತು 2014-15ನೇ ಸಾಲಿನ ಮುಕ್ತ ವಿವಿ ಕೋರ್ಸ್‌ಗಳಿಗೆ ಯುಜಿಸಿ ಮಾನ್ಯತೆ ಕಲ್ಪಿಸಿಕೊಡುವ ಪ್ರಯತ್ನಗಳು ನಡೆದಿವೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯಕ್ಕೂ ಪತ್ರ ಬರೆಯಲಾಗಿದೆ.

ಇದಕ್ಕೆ ಸ್ಪಂದನೆ ನೀಡಿ ಮಾನ್ಯತೆ ನೀಡಲು ಯುಜಿಸಿಗೂ ನಿರ್ದೇಶನ ನೀಡಲಾಗಿದೆ. ಆದರೆ, ಕೆಲವು ಷರತ್ತು ಪೂರೈಸದೆ ಮಾನ್ಯತೆ ನೀಡುವುದಿಲ್ಲ ಎಂದು ಯುಜಿಸಿ ಹೇಳುತ್ತಿದೆ. ಉಭಯ ಸಾಲಿನ ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ಕಂತಿನಲ್ಲಿ ಪರೀಕ್ಷೆ ನಡೆಸಿ ಮಾನ್ಯತೆ ನೀಡಿ ನ್ಯಾಯ ಕಲ್ಪಿಸಿಕೊಡಬೇಕು ಎಂದು ಮುಕ್ತ ವಿವಿಯಿಂದ ಕೋರಲಾಗಿದೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.

ಸಂಗೀತ ವಿವಿಗೆ ಅನುಕೂಲ


ರಾಜ್ಯವ್ಯಾಪ್ತಿಯ ವಿಶ್ವವಿದ್ಯಾಲಯವಾದರೂ ಸಂಗೀತ ವಿವಿ ಸಂಪನ್ಮೂಲ, ಮೂಲಸೌಕರ್ಯ ಕೊರತೆಯನ್ನು ಎದುರಿಸುತ್ತಿದೆ. ರಾಜ್ಯದ ವಿವಿಧೆಡೆ ಇರುವ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರಗಳ ಕಟ್ಟಡ, ಸಂಪನ್ಮೂಲ, ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ನಮ್ಮ ವಿವಿಗೆ ಮತ್ತು ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ತಿಳಿಸಿದರು.


ಸಂಗೀತ, ತಾಳವಾದ್ಯ, ನೃತ್ಯಕ್ಕೆ ಸಂಬಂಧಪಟ್ಟ ಜೂನಿಯರ್, ಸಿನಿಯರ್, ಪ್ರೀ ವಿದ್ವತ್, ವಿದ್ವತ್ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಅದಕ್ಕಾಗಿ 17 ಸಾವಿರ ವಿದ್ಯಾರ್ಥಿಗಳು ನೋಂದಣಿ ಆಗಿದ್ದಾರೆ. ಈ ಪರೀಕ್ಷೆಗಳನ್ನು ಮುಕ್ತ ವಿವಿ ಕಟ್ಟಡಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ವಿವಿ ತರಗತಿಗಳು, ತರಬೇತಿಗೂ ಮುಕ್ತ ವಿವಿ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದರು.


ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಬಡಾವಣೆಯಲ್ಲಿ ಮಂಜೂರಾಗಿರುವ 5.50 ಎಕರೆ ಜಾಗದಲ್ಲಿ ಸಂಗೀತ ವಿವಿ ಕಟ್ಟಡವನ್ನು ಕಡಿಮೆ ಸಂಪನ್ಮೂಲದಲ್ಲಿ ನಿರ್ಮಿಸಲಾಗುವುದು. ಪ್ರದರ್ಶಕ ಕಲೆ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಟ್ಟಡ ಇದಾಗಲಿದೆ. ಅದಕ್ಕಾಗಿ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಸಲಾಗುತ್ತಿದೆ. ಸರ್ಕಾರದಿಂದ ಅನುಮೋದನೆಯೊಂದೇ ಬಾಕಿ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net