

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ (ಕೆಎಸ್ಒಯು)ದ ಧಾರವಾಡದ ಕಲಿಕಾರ್ಥಿ ಸಹಾಯ (ಅಧ್ಯಯನ) ಕೇಂದ್ರದಲ್ಲಿ 2024-25ನೇ ಸಾಲಿಗೆ ಆನ್ಲೈನ್ ಪ್ರವೇಶ ಆರಂಭಗೊಂಡಿವೆ ಎಂದು ಸಂಯೋಜನಾಧಿಕಾರಿ ಎಚ್.ಎನ್.ನಾಗರಾಜ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಸಿಜಿ, ಡಿಇಬಿ ಹಾಗೂ ಎಐಸಿಟಿಇ, ಎ ಪ್ಲಸ್ ಮಾನ್ಯತೆ ಪಡೆದ ಮುಕ್ತ ವಿವಿಯು ಎಲ್ಲರಿಗೂ ಉನ್ನತ ಶಿಕ್ಷಣ ಎಲ್ಲೆಡೆ ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬರ ಮನೆ ಬಾಗಿಲಿಗೆ ಶಿಕ್ಷಣ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.
ಕೇಂದ್ರದಲ್ಲಿ ಬಿಎ, ಬಿಕಾಂ, ಬಿಎಸ್ಸಿ ಸಾಮಾನ್ಯ, ಬಿಎಸ್ಸಿ ಐಟಿ, ಬಿಎಸ್ಸಿ ಹೋಂ ಸೈನ್ಸ್, ಬಿಬಿಎ, ಬಿಸಿಎ ವಿಷಯದಲ್ಲಿ ಸ್ನಾತಕ ಪದವಿ, ವಿವಿಧ ವಿಷಯಗಳ ಡಿಪ್ಲೋಮಾ, ಸಟಿರ್ಫಿಕೇಟ್ ಕೋರ್ಸ್ಗಳು ಸೇರಿ 50ಕ್ಕೂ ಅಧಿಕ ಕೋರ್ಸ್ಗಳಿವೆ. ಧಾರವಾಡದಲ್ಲೇ ಪರೀಕ್ಷೆಗಳು ನಡೆಯಲಿವೆ. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ, ತರಬೇತಿ ಜತೆಗೆ ಉದ್ಯೋಗ ಮೇಳದ ಮೂಲಕ ಉದ್ಯೋಗ ಲಭಿಸಲಿದೆ ಎಂದರು.
ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಅಂಕಪಟ್ಟಿ, ಆಧಾರ ಕಾರ್ಡ್, ಭಾವಚಿತ್ರ ಸೇರಿ ಇತರ ದಾಖಲಾತಿಗಳನ್ನು ನೀಡಬೇಕು. ಪ್ರವೇಶಾತಿ ಪಡೆಯಲು ನ. 11 ಕೊನೇ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಉದ್ಯೋಗ ಭವನ 1ನೇ ಮಹಡಿ, ಕೆಎಸ್ಒಯು ಅಧ್ಯಯನ ಕೇಂದ್ರ, ಜುಬಿಲಿ ವೃತ್ತ, ಧಾರವಾಡ ವಿಳಾಸ ಸಂಪಕಿರ್ಸಬಹುದು ಎಂದರು.