

ಮೈಸೂರು: ಮಹಿಳೆಯರ ರಕ್ಷಣೆ ಸರ್ಕಾರ ಹಲವಾರು ಕಾನೂನುಗಳು ಇದ್ದು, ಕಾನೂನನ್ನು ಮಹಿಳೆಯರು ತಮ್ಮ ರಕ್ಷಣೆಗೋಸ್ಕರ ಮಾತ್ರ ಬಳಕೆ ಮಾಡಬೇಕು. ಒಂದುವೇಳೆ ದುರ್ಬಳಕೆ ಮಾಡಿದರೆ ಕಾನೂನು ದುರ್ಬಲಗೊಳ್ಳುತ್ತದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಎನ್. ನಂದಿನಿ ಎಚ್ಚರಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ವಿವಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಮಹಿಳೆಯರಿಗೆ ಉದ್ಯೋಗ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಯುವ ಸಂಬಂಧ ಜಾಗೃತಿ ಮೂಡಿಸುವ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಈ ಹಿಂದೆ ಹೆಚ್ಚಿನ ಅವಕಾಶಗಳು ಇರುತ್ತಿರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಅವರು ಕಾಲ ಕಳೆಯುತ್ತಿದ್ದರು. ಆದರೆ, ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆತ ನಂತರ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಸರ್ಕಾರ ಸಮಿತಿ ರಚಿಸುವಂತೆ ಸುತ್ತೂಲೆ ಹೊರಡಿಸಿದ್ದು, 10ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೆಲಸ ಮಾಡುವ ಜಾಗದಲ್ಲಿ ಸಮಿತಿ ರಚಿಸಬೇಕು. ಈ ಸಮಿತಿಯು ಮಹಿಳೆಯರಿಗೆ ಕೆಲಸದ ಜಾಗದಲ್ಲಿ ಸುರಕ್ಷತೆಯ ಭಾವವನ್ನು ಮೂಡಿಸುತ್ತದೆ ಎಂದರು.
ದುಡಿಯುವ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಆ ಸಮಸ್ಯೆಗಳನ್ನು ಕೇವಲ ಕಾನೂನು ಮಾತ್ರವಲ್ಲದೆ ಇತರೆ ಮಾರ್ಗಗಳ ಮೂಲಕವೂ ಪರಿಹರಿಸಿಕೊಳ್ಳಲು ಅವಕಾಶಗಳು ಇದೆ. ನಾವು ಆ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಮುಖ್ಯ. ಎಲ್ಲ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ ಮಹಿಳೆಯರಿಗೆ ಇದೆ ಎಂದು ಹೇಳಿದರು.
ಇತ್ತೀಚೆಗೆ ಸೈಬರ್ ಕ್ರೈಂ ಹೆಚ್ಚಾಗಿ ಕಂಡು ಬರುತ್ತಿದ್ದು, ಇದರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕುತ್ತಿದ್ದಾರೆ. ವಿದ್ಯಾಭ್ಯಾಸಕ್ಕೂ ಮೊಬೈಲ್ ಅಡಚಣೆ ಉಂಟು ಮಾಡುತ್ತಿದೆ. ಮೊಬೈಲ್ಅನ್ನು ಇತಿಮಿತಿಯಾಗಿ ಬಳಸಬೇಕು. ಸಾಕಷ್ಟು ಜನರು ನಕಲಿ ಆ್ಯಪ್ ಬಳಸಿ ಹಣ ಕಳೆದುಕೊಳ್ಳುತ್ತಿದ್ದಾರೆ. ಹಣ ಕಳೆದುಕೊಂಡ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಹೆಚ್ಚಾಗುತ್ತಿದ್ದು, ಪ್ರಸಕ್ತ ವರ್ಷ 50ಕ್ಕೂ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ. 18 ವರ್ಷ ಕ್ಕಿಂತ ಕೆಳಗಿನ ಹೆಣ್ಣು ಮಕ್ಕಳು ಮನೆಬಿಟ್ಟು ಹೋದ 130 ಪ್ರಕರಣಗಳಲ್ಲಿ ದಾಖಲಿಸಿಕೊಂಡು ಅವರನ್ನು ಮರಳಿಗೆ ಪಾಲಕರಿಗೆ ಒಪ್ಪಿಸುವ ಕಾರ್ಯ ಮಾಡಿದ್ದೇವೆ ಎಂದು ಹೇಳಿದರು.
ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ನಾವು ಯಾವುದೇ ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು. ಈ ರೀತಿ ನೋಡುವವರು ತಮ್ಮ ಮನೆಯಲ್ಲೂ ಹೆಣ್ಣು ಮಕ್ಕಳು ಇದ್ದಾರೆ ಎಂಬುದನ್ನು ಅರಿಯಬೇಕು. ಕೆಲಸದ ಸ್ಥಳದಲ್ಲಿ ಎಲ್ಲರು ಸಹೋದರ ಸಹೋದರಿಯ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಮುಕ್ತ ವಿವಿಯ ಕುಲಸಚಿವ ಪ್ರೊ. ಕೆ.ಎಲ್.ಎನ್. ಮೂರ್ತಿ, ಶೈಕ್ಷಣಿಕ ಡೀನ್ ಪ್ರೊ.ಎನ್. ಲಕ್ಷ್ಮೀ, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಬಿ. ಪ್ರವೀಣ್ ಕುಮಾರ್, ಪ್ರಾಧ್ಯಾಪಕಿ ಪ್ರೊ.ಲೋಲಾಕ್ಷಿ, ಶ್ರೀರಂಗಪಟ್ಟಣದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಡಾ. ಎನ್. ಪ್ರಭಾ ಇದ್ದರು.