

ದೇವದುರ್ಗ: ಶಾಸಕ ಕೆ. ಶಿವನಗೌಡ ನಾಯಕ ಆರಂಭಿಸಿರುವ ಅನ್ನದಾಸೋಹ ಕೇಂದ್ರ ಬಡವರ ಹಸಿವು ನೀಗಿಸುತ್ತಿದ್ದು, ಉಳಿದ ಶಾಸಕರಿಗೆ ಇದು ಮಾದರಿ ಎಂದು ತೆಲಂಗಾಣ ರಾಜ್ಯದ ಶಾಸಕ ಹಾಗೂ ರಾಯಚೂರಿನ ನವೋದಯ ಸಂಸ್ಥೆ ಮುಖ್ಯಸ್ಥ ಎಸ್.ಎಸ್.ರೆಡ್ಡಿ ಹೇಳಿದರು.
ಅನ್ನದಾಸೋಹ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು. ಕರೊನಾದಂಥ ಸಂಕಷ್ಟ ಸಮಯದಲ್ಲಿ ಜನರು ದುಡಿಮೆ ಇಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಆರೋಗ್ಯ ಸಮಸ್ಯೆ ಬಾಧಿಸುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಜನಪ್ರತಿನಿಧಿಗಳು ಜನರ ನೋವಿಗೆ ಸ್ಪಂದಿಸುತ್ತಿಲ್ಲ. ಅಲ್ಲದೇ ಮನೆಯಿಂದ ಹೊರಬರಲೂ ಹಿಂದೇಟು ಹಾಕುತ್ತಿದ್ದಾರೆ. ಆದರೆ, ದೇವದುರ್ಗ ಶಾಸಕ ಕೆ ಶಿವನಗೌಡ ನಾಯಕ ತಮ್ಮ ಕ್ಷೇತ್ರದ ಜನರ ಹಸಿವು ನೀಗಿಸುತ್ತಿದ್ದಾರೆ. ಇದು ಭಗವಂತನ ಸೇವೆಗೆ ಸಮ. ನಿತ್ಯ 40 ಸಾವಿರ ಜನರಿಗೆ ಊಟ ನೀಡುವುದು ಸಾಮಾನ್ಯ ಕೆಲಸವಲ್ಲ. ದೇವದುರ್ಗ ತಾಲೂಕಿನ ಎಲ್ಲ 33 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಅನ್ನ ನೀಡುತ್ತಿದ್ದಾರೆ. ಒಂದು ತಿಂಗಳಿನಿಂದ ಅನ್ನದಾಸೋಹ ಶಿಬಿರ ನಡೆಯುತ್ತಿರುವುದನ್ನು ನಾನು ಪತ್ರಿಕೆ ಹಾಗೂ ಸುದ್ದಿ ಮಾಧ್ಯಮದಲ್ಲಿ ನೋಡಿದ್ದೇನೆ. ಸ್ವತಃ ನೋಡಲು ಬಂದಿರುವೆ. ಇಲ್ಲಿನ ಅಚ್ಚುಕಟ್ಟು ವ್ಯವಸ್ಥೆ ತುಂಬಾ ಚೆನ್ನಾಗಿದೆ. ಅನ್ನದಾನದ ಜತೆ ಇಲ್ಲಿನ ನಿರುದ್ಯೋಗಿ ಮಹಿಳೆಯರು, ಯುವಕರು, ಆಟೋ ಚಾಲಕರಿಗೆ ಉದ್ಯೋಗವನ್ನೂ ನೀಡಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು. ಪ್ರಮುಖರಾದ ಬಸವರಾಜ ಕೊಪ್ಪರ, ಬಸವರಾಜ ಅಕ್ಕರಕಿ, ಅಮರೇಶ ಮಡಿವಾಳ ಇತರರು ಇದ್ದರು.
ಕೋವಿಡ್ 19 ತಡೆಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಲಾಕ್‌ಡೌನ್ ಅನಿವಾರ್ಯವಾಗಿದೆ. ಈ ಸಮಯದಲ್ಲಿ ಸಂಕಷ್ಟ ಎದುರಿಸುತ್ತಿರುವವರಿಗೆ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ. ಜತೆಗೆ ಉಚಿತವಾಗಿ ಪಡಿತರ ನೀಡುತ್ತಿದೆ. ಮಹಾಮಾರಿ ತಡೆಗೆ ಸಾರ್ವಜನಿಕರು ಆರೋಗ್ಯ ಇಲಾಖೆ ಜತೆ ಕೈಜೋಡಿಸಬೇಕು. ಅವರು ನೀಡುವ ನಿಯಮ ಹಾಗೂ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.| ಎಸ್.ಎಸ್.ರೆಡ್ಡಿ, ತೆಲಂಗಾಣ ಶಾಸಕ