ಕಾನೂನು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್, ಧಾರವಾಡದಲ್ಲಿ ಆಯೋಜನೆ

IMG_20240723_122515_148.jpg
Published on

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವತಿಯಿಂದ 8ನೇ ಅಂತರ ಮಹಾವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಅನ್ನು ಜುಲೈ 25ರಿಂದ ಎರಡು ದಿನಗಳವರೆಗೆ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಕುಲಪತಿ ಡಾ. ಸಿ. ಬಸವರಾಜು ತಿಳಿಸಿದರು.

ನವನಗರದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮೈಸೂರು ವಲಯ, ಮಂಗಳೂರು, ಬೆಂಗಳೂರು ದಣ ಹಾಗೂ ಉತ್ತರ, ಹುಬ್ಬಳ್ಳಿ ಮತ್ತು ಕಲಬುರ್ಗಿ ಸೇರಿ ಆರು ವಲಯಗಳಲ್ಲಿ ಅಥ್ಲೆಟಿಕ್ಸ್ ಆಯ್ಕೆ ಪ್ರಕ್ರಿಯೆ ನಡೆಸಿ ಇದೀಗ ಈ ಎಲ್ಲ ವಲಯಗಳಲ್ಲಿ ಆಯ್ಕೆಯಾಗಿರುವ ಸುಮಾರು 262 ವಿದ್ಯಾರ್ಥಿಗಳು ಅಂತರ ಮಹಾವಿದ್ಯಾಲಯ ಅಥ್ಲೆಟಿಕ್ಸ್ ಗೆ ಆಗಮಿಸಲಿದ್ದಾರೆ ಎಂದರು.

146 ಪುರುಷ ಹಾಗೂ 116 ಮಹಿಳಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಇದರ ಜತೆಗೆ ಆರು ವಲಯದ 56 ಕಾಲೇಜುಗಳಿಂದ ಮ್ಯಾನೇಜರ್ ಗಳು, ಮಾರ್ಗದರ್ಶಕರು ಆಗಮಿಸಲಿದ್ದು, ಒಟ್ಟು 500 ಜನರು ಎರಡು ದಿನಗಳ ಕ್ರೀಡಾ ಹಬ್ಬದಲ್ಲಿ ಪಾಲ್ಗೊಳ್ಳುವರು.

ಇವರೆಲ್ಲರಿಗೂ ವಸತಿ, ಊಟದ ವ್ಯವಸ್ಥೆ ಹಾಗೂ ಟಿ ಶರ್ಟ್, ಶೂ, ಮುಂತಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

ಕ್ರೀಡಾಕೂಟದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ನಗದು ಬಹುಮಾನ, ಅತ್ಯುತ್ತಮ ಕ್ರೀಡಾಪಟುಗಳಿಗೆ 10 ಸಾವಿರ ರೂ. ನಗದು ಜತೆಗೆ ಟ್ರೋಫಿ ನೀಡಲಾಗುತ್ತಿದೆ. ನಿವೃತ್ತ ಕ್ರೀಡಾ ನಿರ್ದೇಶಕರು, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಹಾಗೂ ನಗದು ಪುರಸ್ಕಾರ ನೀಡಲಾಗುತ್ತದೆ ಎಂದರು.

ಹರ್ಡಲ್ಸ್ ನಲ್ಲಿ ಶಿವಮೊಗ್ಗದ ಪ್ರಜ್ಞಾ, ಹೈಜಂಪ್ ನಲ್ಲಿ ಪ್ಲೋರಿಸಾ, ಬಾಕ್ಸಿಂಗ್ ನಲ್ಲಿ ಬೆಂಗಳೂರಿನ ಪ್ರೀತಿ ಯಾದವ ಹಾಗೂ ಹುಬ್ಬಳ್ಳಿಯ ಯಶವಂತಗೌಡ ಸಾಧನೆ ಮಾಡಿದ್ದು, ಇವರನ್ನು ಉದ್ಘಾಟನೆ ಸಮಾರಂಭದಲ್ಲಿ ಗೌರವಿಸಲಾಗುತ್ತಿದೆ.

ಪ್ರತಿ ವರ್ಷ ವಿಶ್ವವಿದ್ಯಾಲಯದ ವತಿಯಿಂದ ಕ್ರೀಡಾಕೂಟ ಆಯೋಜನೆ ಮಾಡುತ್ತ ಬರಲಾಗಿದೆ. ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುವುದು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಪ್ರೇರಣೆ ನೀಡುವ ಉದ್ದೇಶದೊಂದಿಗೆ ಹಾಗೂ ಪ್ರತಿಭೆ ಗುರುತಿಸಲು ಇಂತಹ ಕಾರ್ಯಕ್ರಮ ಏರ್ಪಡಿಸುತ್ತ ಬರಲಾಗಿದೆ ಎಂದರು.

ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಖಾಲಿದ್ ಖಾನ್, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ, ಕುಲಸಚಿವೆ ಅನುರಾಧಾ ವಸ್ತ್ರದ, ಸಿಂಡಿಕೇಟ್ ಸದಸ್ಯ ವಸಂತ ಲದ್ವಾ ಗೋಷ್ಠಿಯಲ್ಲಿದ್ದರು.

ಉದ್ಘಾಟನೆ: ಜುಲೈ 25ರಂದು ಸಂಜೆ 5 ಗಂಟೆಗೆ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಉದ್ಘಾಟನೆ ನಡೆಯಲಿದ್ದು, ಕ್ರಿಕೆಟ್ ಪಟು ದೊಡ್ಡ ಗಣೇಶ ಅತಿಥಿಗಳಾಗಿ ಪಾಲ್ಗೊಳ್ಳುವರು. ಜುಲೈ 26ರಂದು ಸಂಜೆ 5ಕ್ಕೆ ನಡೆಯುವ ಸಮಾರೋಪದಲ್ಲಿ ಖ್ಯಾತ ಒಲಿಂಪಿಯನ್ ಪ್ರಮೀಳಾ ಅಯ್ಯಪ್ಪ ಅತಿಥಿಯಾಗಿ ಭಾಗವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net