ಗಳಿಸಿದ ಜ್ಞಾನ ಹಂಚಿದಾಗಲೇ ಸಂತೃಪ್ತಿ,  ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅಭಿಮತ,  ಎನ್ಎನ್ಎಸ್ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

IMG-20250215-WA0028.jpg
Published on

ಹುಬ್ಬಳ್ಳಿ: ಒಬ್ಬ ನ್ಯಾಯಾಧೀಶರಾದವರು ವಾದ- ಪ್ರತಿವಾದ ಆಲಿಸಿದ ನಂತರ ಹೇಗೆ ತೀರ್ಪು ನೀಡುವುದು ಅತ್ಯಗತ್ಯವೋ ಅದೇ ರೀತಿ ಗಳಿಸಿದ ಜ್ಞಾನವನ್ನು ಸೇವಾ ಮನೋಭಾವದೊಂದಿಗೆ ಯಾರಿಗೆ ಅವಶ್ಯಕವೋ ಅವರಿಗೆ ಹಂಚಿದಾಗ ಸಂತೃಪ್ತಿ ಸಿಗುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅಭಿಪ್ರಾಯಪಟ್ಟರು.

ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ರಾಜ್ಯ ಎನ್ಎಸ್ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶಗಳು ಜಂಟಿಯಾಗಿ ಐದು ದಿನಗಳವರೆಗೆ ಎನ್ಎಸ್ಎಸ್ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಜ್ಞಾನಶಕ್ತಿ, ಕಾರ್ಯಶಕ್ತಿ ಹಾಗೂ ಭಾವಶಕ್ತಿ ಈ ಮೂರು ಅಂಶಗಳು ಸೇರಿದಾಗ ಸುಂದರ ಸಮ್ಮಿಲನವಾಗುತ್ತದೆ. ಅದು ನಿಜವಾದ ಸೇವೆ ಎನಿಸಿಕೊಳ್ಳುತ್ತದೆ. ಇಂತಹ ಸೇವೆಯ ಅವಕಾಶ ಇರುವುದು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಗತ್ಯ ಇರುವವರಿಗೆ ನೀಡಬೇಕು ಎಂದು ಸಲಹೆ ನೀಡಿದರು.

23 ಸಾವಿರ ಪ್ರಕರಣ:
ಲೋಕಾಯುಕ್ತರಾಗಿ ನೇಮಕವಾದ ನಂತರ ಎರಡು ವರ್ಷದಲ್ಲಿ 23 ಸಾವಿರ ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿವೆ. ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರ ಕಿತ್ತು ಎಸೆಯಲು ಎಲ್ಲರೂ ಕೈಜೋಡಿಸಬೇಕು. ಅಕ್ರಮ ಕಂಡು ಬಂದಾಗ, ಸರ್ಕಾರಿ ಸೇವೆ ಅರ್ಹತೆ ಇದ್ದರೂ ಸಿಗದೇ ಇದ್ದಾಗ ಲೋಕಾಯುಕ್ತರಿಗೆ ದೂರು ನೀಡಬೇಕು ಎಂದು ಹೇಳಿದರು.

ಗದಗ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ನಾಡಗೌಡರ್ ಮಾತನಾಡಿ, ಮಾನವರ ಮಧ್ಯೆ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಲು ಎನ್ಎಸ್ಎಸ್ ಕಾರ್ಯಕ್ರಮ ಸಹಾಯಕವಾಗಿದೆ. ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಇದು ಸಹಕಾರಿಯಾಗಿದೆ. ತಮ್ಮ ವ್ಯಕ್ತಿತ್ವ ನಿರೂಪಿಸಲು ಎನ್ಎಸ್ಎಸ್ ವೇದಿಕೆಯಾಗಿದೆ ಎಂದರು.

ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭು ಶಂಕರ್ ಮಾತನಾಡಿ, ಕ್ರೀಡೆ, ಎನ್ಸಿಸಿ ಹಾಗೂ ಎನ್ಎಸ್ಎಸ್ ಇವುಗಳು ಪಠ್ಯೇತರ ಚಟುವಟಿಕೆಗಳು. ಕ್ರೀಡೆ, ಎನ್ಸಿಸಿಗೆ ಸೇರಲು ಕೆಲವು ದೈಹಿಕ ದೃಢತೆಗಳು ಬೇಕು. ಆದರೆ, ಎನ್ಎಸ್ಎಸ್ಗೆ ಸೇವೆ ಮಾಡಬಲ್ಲೆ ಎಂಬ ಮಾನಸಿಕ ದೃಢತೆ ಇದ್ದರೆ ಸಾಕು. ಇದರ ಮೂಲಕ ದೇಶ ಸೇವೆ ಮಾಡಬಹುದು ಎಂದರು.

ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಐ.ಬಿ. ಬಿರಾದಾರ ಮಾತನಾಡಿ, ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ ಇದಾಗಿತ್ತು. 26 ವಿಶ್ವವಿದ್ಯಾಲಯದ 80 ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳು ಭಾಗವಹಿಸಿದ್ದರು. ಅನೇಕರು ಐದು ದಿನದ ಬದಲು ಏಳು ದಿನ ತರಬೇತಿ ಆಯೋಜಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು.

ಎನ್ಎಸ್ಎಸ್ ತರಬೇತಿ ಕೇಂದ್ರದ ನಿರ್ದೇಶಕ ಪ್ರೊ. ಜಿ.ಬಿ. ಶಿವರಾಜು, ಡಾ. ಕೆ.ಎಂ ವೀರಯ್ಯ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳು ಅನುಭವ ಹಂಚಿಕೊಂಡರು.

ಕಾನೂನು ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ಸಂಜೀವಕುಮಾರ ಸಿಂಗ್, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ, ಸಹಾಯಕ ಪ್ರಾಧ್ಯಾಪಕರಾದ ಸುನೀಲ ಬಗಾಡೆ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಪರ್ಣಾ ಪೂಜಾರ ನಿರೂಪಿಸಿದರು. ಡಾ. ಆನಂದ ಜಕ್ಕಣ್ಣವರ ಪ್ರಾಥಿರ್ಸಿದರು. ಸಹಾಯಕ ಪ್ರಾಧ್ಯಾಪಕಿ ಪುಷ್ಪಾ ಕೆ.ಎಸ್. ಸ್ವಾಗತಿಸಿದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಗಿರೀಜಾ ಹಸಬಿ ವರದಿ ವಾಚಿಸಿದರು. ಶೋಭಾ ಹೂಗಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net