ಹುಬ್ಬಳ್ಳಿ: ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ 10ನೇ ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಜ.4 ಮತ್ತು 5ರಂದು ಹಮ್ಮಿಕೊಳ್ಳಲಾಗಿದೆ.
ದೇಶಾದ್ಯಾಂತ 28ಕ್ಕೂ ಹೆಚ್ಚು ತಂಡಗಳು (ಒಂದು ತಂಡದಲ್ಲಿ 3 ಅಭ್ಯರ್ಥಿಗಳು) ಗೋವಾ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಮತ್ತು ಆಂಧ್ರ ಪ್ರದೇಶಗಳಿಂದ ಆಗಮಿಸಲಿವೆ. ಸುಮಾರು 100ಕ್ಕೂ ಹೆಚ್ಚು ಕಾನೂನು ವಿದ್ಯಾರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಸ್ಪರ್ಧೆಗಾಗಿ "ಸಂವಿಧಾನ ಮತ್ತು ಸಾಮಾಜಿಕ ಮಾಧ್ಯಮ' ಎಂಬ ವಿಷಯದ ಸಮಸ್ಯೆಯನ್ನು ಒರ್ಯಾಕಲ್ ಇಂಡಿಯಾ ಲಿಮಿಟೆಡ್ ಹಿರಿಯ ಅಧಿಕಾರಿ ಸಂದೀಪ ಹೆಗಡೆ ರಚನೆ ಮಾಡಿದ್ದಾರೆ.
20ಕ್ಕೂ ಹೆಚ್ಚು ನುರಿತ ಕಾನೂನು ತರು, ನ್ಯಾಯಾಧೀಶರು ಮತ್ತು ಹಿರಿಯ ನ್ಯಾಯವಾದಿಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.
ಅತ್ಯುತ್ತಮ ವಾದ ಪತ್ರ, ಅತ್ಯುತ್ತಮ ಪುರುಷ ವಾದಿ, ಅತ್ಯುತ್ತಮ ಮಹಿಳಾ ವಾದಿ ಸೇರಿ ಹಲವು ಬಹುಮಾನಗಳಿವೆ.
ಉದ್ಘಾಟನೆ:
ಜ. 4ರಂದು ಬೆಳಗ್ಗೆ 10.30ಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಧೀಶ ಹಾಗೂ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಅಧ್ಯಕ್ಷರಾದ ಬಿ.ಎ. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು.
ಕುಲಪತಿ ಡಾ. ಸಿ. ಬಸವರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಜ. 5ರಂದು ಸಂಜೆ 4ಕ್ಕೆ ಕಲ್ಪಿತ ನ್ಯಾಯಾಲಯ ಸಮಾರೋಪ ಸಮಾರಂಭಕ್ಕೆ ಅತಿಥಿಗಳಾಗಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎ.ಎಸ್. ಪಚ್ಚಾಪುರೆ ಆಗಮಿಸಲಿದ್ದಾರೆ. ಕುಲಸಚಿವೆ ಅನುರಾಧ ವಸ್ತ್ರದ, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ ಉಪಸ್ಥಿತರಿರುವರು.
ವಿವಿ ಕಾನೂನು ಶಾಲೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಸುನೀಲ್ ಬಾಗಡೆ, ಡಾ. ಅರ್ಚನಾ ಕೆ., ಡಾ. ಭೀಮಾಬಾಯಿ ಎಸ್. ಮೂಲಗೆ, ಐ.ಬಿ. ಬಿರಾದಾರ ಹಾಗೂ ಗಿರೀಶಗೌಡ ಪಾಟೀಲ್ ಈ ಸ್ಪರ್ಧೆಯನ್ನು ಸಂಯೋಜಿಸಿದ್ದಾರೆ.