

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಕೆಎಲ್ಇ ಸಂಸ್ಥೆಯ ಗುರುಸಿದ್ದಪ್ಪ ಕೋತಂಬ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್ ಕಾನೂನು ಮಹಾವಿದ್ಯಾಲಯಗಳ ಎರಡು ದಿನಗಳ ಪುರುಷರ ಕಬಡ್ಡಿ ಪಂದ್ಯಾವಳಿ ಭಾನುವಾರದಿಂದ ಆರಂಭವಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕಾನೂನು ವಿವಿ ಕುಲಸಚಿವರಾದ ಪ್ರೊ. ರತ್ನಾ ಭರಮಗೌಡರ, ಜೀವನದಲ್ಲಿ ಶಿಣದ ಜತೆಗೆ ಕ್ರೀಡೆಯೂ ಬಹುಮುಖ್ಯವಾಗಿದೆ. ಇಲ್ಲಿ ಸೋಲು ಗೆಲವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದು ಮಹತ್ವದ್ದು. ಇದರಿಂದ ಹೊಸ ಕೌಶಲಗಳನ್ನು ಕಲಿಯಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕಬಡ್ಡಿ ಆಟವು ಅತ್ಯಂತ ಹಳೆಯ ಕ್ರೀಡೆಯಾಗಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾಥಿರ್ಗಳು ಕೇವಲ ಆನ್ಲೈನ್ ಮತ್ತು ಕ್ರಿಕೆಟ್ ಆಟಕ್ಕೆ ಸೀಮಿತರಾಗಿದ್ದಾರೆ. ಕಾನೂನು ವಿದ್ಯಾಥಿರ್ಗಳು ಸ್ಪರ್ಧಾತ್ಮಕ ಮನೋಭಾವನೆಯಿಂದ ಇಂಥ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವುದು ಶ್ಲಾನೀಯ. ಮುಂದೆ ತಮ್ಮ ವೃತ್ತಿ ಜೀವನದಲ್ಲೂ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ರಾಜ್ಯದ ಕಲಬುರಗಿ, ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಮತ್ತು ಮೈಸೂರು ವಿಭಾಗಗಳಿಂದ 40 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
ರೋಹಿಣಿ ಪ್ರಾರ್ಥನೆ ಹಾಡಿದರು. ಜಿ.ಕೆ. ಕಾಲೇಜಿನ ಪ್ರಾಚಾರ್ಯ ಡಾ. ಜ್ಞಾನೇಶ್ವರ ಚೌರಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಬಾಹುಬಲಿ ಕುರಕುರಿ ಕಾಲೇಜು ಹಾಗೂ ತಂಡಗಳ ಪರಿಚಯ ಮಾಡಿದರು. ಚೇತನಾ ಪುಲೇಶಿ ಕಾರ್ಯಕ್ರಮ ನಿರೂಪಿಸಿದರು. ಡಾ. ಖಲೀದ ಖಾನ ವಂದಿಸಿದರು.