

ಹುಬ್ಬಳ್ಳಿ: ಸಂಶೋಧನೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮತ್ತು ದೇಶ ವಿದೇಶದ ವಿಶ್ವವಿದ್ಯಾಲಯ- ಸಂಸ್ಥೆಗಳ ಸಹಯೋಗದೊಂದಿಗೆ ಜ್ಞಾನಾಭಿವೃದ್ಧಿಗೆ ಸಹಕರಿಸುವ ಉದ್ದೇಶದಿಂದ ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಹೈದ್ರಾಬಾದಿನ ಗ್ಲೋಬಲ್ ಅಕಾಡೆಮಿ ಆಫ್ ಲಾ- ಟೆಕ್ ಎಜ್ಯುಕೇಶನ್ ಹಾಗೂ ರಿಸರ್ಚ್ (ಗಲ್ಟರ್) ಜತೆ ಒಡಬಂಡಿಕೆ ಮಾಡಿಕೊಂಡಿದೆ.
ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಡಾ. ಸಿ. ಬಸವರಾಜು ಅವರು, ಗಲ್ಟರ್ ದೇಶದ ಪ್ರತಿಷ್ಠತ ಅಕಾಡೆಮಿಯಾಗಿದೆ. ಕಾನೂನು ವಿಷಯದಲ್ಲಿ ಮೌಲ್ಯಯುತ ಶಿಕ್ಷಣ ನೀಡುತ್ತಿದೆ. ಅವರೊಂದಿಗೆ ಸೇರಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಅಷ್ಟೇ ಅಲ್ಲ ಸಾರ್ವಜನಿಕರಿಗೂ ಪ್ರಸ್ತುತ ಕಾನೂನು ವಿಷಯದಲ್ಲಿನ ಬದಲಾವಣೆಗಳ ಬಗ್ಗೆ ತಿಳಿವಳಿಕೆ ನೀಡಲು ವಿಶ್ವವಿದ್ಯಾಲಯ ಉತ್ಸುಕವಾಗಿದೆ. ಇದಕ್ಕಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಕಾನೂನು ವಿಶ್ವವಿದ್ಯಾಲಯವು ಈಗಾಗಲೇ ವಿದ್ಯಾಥಿರ್ಗಳ ಜ್ಞಾನಾಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ವಿದ್ಯಾಥಿರ್ಗಳ ಜತೆಯಲ್ಲೇ ಸಮಾಜದ ಎಲ್ಲ ಸ್ತರದ ಜನರಲ್ಲಿ ಕಾನೂನು ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ಲೋಬಲ್ ಅಕಾಡೆಮಿಯೊಂದಿಗೆ ಕೈಜೋಡಿಸುತ್ತಿದ್ದೇವೆ ಎಂದು ಹೇಳಿದರು.
ಅಕಾಡೆಮಿಯಲ್ಲಿ ನುರಿತ ಕಾನೂನು ತಜ್ಞರಿದ್ದು, ಮುಂಬರುವ ದಿನಗಳಲ್ಲಿ ವಿಶೇಷ ಸೆಮಿನಾರ್, ಕಾರ್ಯಾಗಾರ, ಸಂಶೋಧನೆ, ತರಬೇತಿಯಂತಹ ಕಾರ್ಯಕ್ರಮಗಳು ಜತೆಗೂಡಿ ನಡೆಯಲಿವೆ. ಕಾನೂನು ವಿಶ್ವವಿದ್ಯಾಲಯದಡಿ 110ಕ್ಕೂ ಹೆಚ್ಚು ಕಾನೂನು ಕಾಲೇಜುಗಳಿದ್ದು, ಅವೆಲ್ಲವುಗಳಿಗೂ ಇದರ ಪ್ರಯೋಜನ ಸಿಗಲಿದೆ ಎಂದರು.
ನಾಲ್ಕನೇ ಎಂಒಯು: ಗ್ಲೋಬಲ್ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಡಾ. ಎಂ.ಕೆ. ಭಂಡಾರಿ ಮಾತನಾಡಿ, ನಮ್ಮ ಅಕಾಡೆಮಿಯು ನಿವೃತ್ತ ನ್ಯಾಯಾಧೀಶರು, ವಕೀಲರು ಸೇರಿದಂತೆ ಅನೇಕ ಕಾನೂನು ತಜ್ಞರನ್ನು ಒಳಗೊಂಡಿದೆ. ಈಗಾಗಲೇ ನಾಲ್ಕು ರಾಜ್ಯಗಳ ವಿಶ್ವವಿದ್ಯಾಲಯದ ಜತೆ ಇಂತಹ ಒಡಬಂಡಿಕೆ ಮಾಡಿಕೊಳ್ಳಲಾಗಿದೆ. ಇನ್ನೂ ಎರಡು ವಿಶ್ವವಿದ್ಯಾಲಯಗಳೊಂದಿಗೆ ಶ್ರೀ ಒಪ್ಪಂದವಾಗುವ ನಿರೀಕ್ಷೆ ಇದೆ. ಅಲ್ಲದೆ, ಯುಎಸ್ಎ ಹಾಗೂ ಜರ್ಮನಿಯಲ್ಲಿರುವ ವಿವಿಗಳ ಜತೆ ಜ್ಞಾನ ಹಂಚಿಕೆ ಮಾಡಿಕೊಳ್ಳುವ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ತಂತ್ರಜ್ಞಾನ ಹಾಗೂ ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಕಡಿಮೆ. ಕೃತಕ ಬುದ್ಧಿಮತ್ತೆ (ಎಐ) ಬಂದ ಬಳಿಕ ಆನ್ ಲೈನ್ ವಂಚನೆಗಳ ಪ್ರಕರಣ ಜಾಸ್ತಿಯಾಗುತ್ತಿವೆ. ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಅಕಾಡೆಮಿಯಲ್ಲಿ ಕಾನೂನು ಅರಿವು, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಸೇರಿ ಅನೇಕ ಸಟಿರ್ಫಿಕೇಟ್ ಹಾಗೂ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗಿದೆ ಎಂದು ಹೇಳಿದರು.