ಮೈಸೂರಿನಲ್ಲಿ ಕೆಎಸ್‌ಐಸಿ ನೌಕರರಿಂದ ಪ್ರತಿಭಟನೆ

ksci
Published on

ಮೈಸೂರು: ಕೆಲಸ ಕಳೆದುಕೊಳ್ಳುವ ಹಾಗೂ ಸೇವಾ ಹಿರಿತನ ಕಡಿತವಾಗುವ ಆತಂಕದಿಂದ ಕೆಎಸ್‌ಐಸಿ ಹೊರಗುತ್ತಿಗೆ ನೌಕರರು ಮಂಗಳವಾರ ಕೆಎಸ್‌ಐಸಿ ಮುಂಭಾಗ ಪ್ರತಿಭಟನೆ ನಡೆಸಿದರು.

ಹೊರಗುತ್ತಿಗೆ ನೌಕರರನ್ನು ನೇಮಕಾತಿ ಮಾಡುವ ಟೆಂಡರ್‌ದಾರರು ಬದಲಾವಣೆ ಆಗಿದ್ದು, ಹೊಸಬರಿಗೆ ಜವಾಬ್ದಾರಿ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್‌ಐಸಿಯಲ್ಲಿ ಕೆಲಸ ಮಾಡುತ್ತಿರುವ 800 ಹೊರಗುತ್ತಿಗೆ ನೌಕರರನ್ನು ಮಾ.29 ರಂದು ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಕೆಎಸ್‌ಐಸಿ ನೋಟಿಸ್‌ನಲ್ಲಿ ಪ್ರಕಟಿಸಿತ್ತು. ಆ ನಂತರ ಇದೀಗ ಏ.2 ರಿಂದ ಕೆಲಸಕ್ಕೆ ಬರುವಂತೆ ಮೌಖಿಕವಾಗಿ ಆದೇಶಿಸಲಾಗಿದೆ.

ಹೊಸ ಟೆಂಡರ್‌ದಾರರು ಬಂದರೆ ನಾವು ಇದುವರೆಗೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ಸೇವಾ ಹಿರಿತನವನ್ನು ಪರಿಗಣಿಸದೆ ಹೊಸದಾಗಿ ನೇಮಕಾತಿ ಮಾಡುವುದು ಸರಿಯಲ್ಲ. ಸಾಕಷ್ಟು ನೌಕರರು 8-10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮನ್ನು ಹೊಸ ನೌಕರರ ರೀತಿಯಲ್ಲಿ ಪರಿಗಣಿಸಿದರೆ ನಮಗೆ ಗ್ರಾೃಚುಟಿ ದೊರೆಯುವುದಿಲ್ಲ. ಸೇವಾ ಹಿರಿತನದ ಮೇಲೆ ವೇತನ ಶ್ರೇಣಿ ನಿಗದಿಯಾಗುತ್ತದೆ. ಹೊಸ ನೌಕರರೆಂದು ಪರಿಗಣಿಸಿದರೆ ವೇತನ ಬಡ್ತಿಯಿಂದಲೂ ವಂಚನೆಗೆ ಒಳಗಾಗುತ್ತೇವೆ. ಟೆಂಡರ್‌ದಾರರು ಬದಲಾದರೂ ಈಗ ಇರುವ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗಬೇಕು ಎಂದು ನೌಕರರು ಒತ್ತಾಯಿಸಿದರು.

ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕ ಟಿ.ಎಸ್. ಶ್ರೀವತ್ಸ, ಕೆಎಸ್‌ಐಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಂತರ ನೌಕರರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದರು. ಯಾವುದೇ ಕಾರಣಕ್ಕೂ ಯಾವುದೇ ನೌಕರರು ಕೆಲಸ ಕಳೆದುಕೊಳ್ಳುವ ಆತಂಕ ಪಡುವ ಅವಶ್ಯಕತೆ ಇಲ್ಲ. ಸಮಸ್ಯೆಯ ಕುರಿತು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕೆಎಸ್‌ಐಸಿ ಹೊರಗುತ್ತಿಗೆ ಮತ್ತು ಇತರೆ ನೌಕರರ ಸಂಘದ ವಿಜೇಂದ್ರ, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಕಾರ್ಯದರ್ಶಿ ಎಂ.ನಾಗೇಶ್, ಜಂಟಿ ಕಾರ್ಯದರ್ಶಿ ಎಸ್.ಧನರಾಜು, ಖಜಾಂಚಿ ರವಿನಂದನ್ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net