ಆ.18ರಂದು ರಾಜ್ಯಾದ್ಯಂತ ಕ್ಷೇತ್ರಪತಿ ಚಿತ್ರ ತೆರೆಗೆ: ನಾಯಕ ನಟ ನವೀನ್ ಶಂಕರ್ ಮಾಹಿತಿ

2
Published on

ಮಂಡ್ಯ: ರೈತರ ಸಮಸ್ಯೆಗಳ ಕುರಿತಂತೆ ಬೆಳಕು ಚೆಲ್ಲುವ ‘ಕ್ಷೇತ್ರಪತಿ’ ಚಿತ್ರ ಬರುವ ಆ.18ರಂದು ರಾಜ್ಯಾದ್ಯಂತ 170 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ನಾಯಕ ನಟ ನವೀನ್ ಶಂಕರ್ ತಿಳಿಸಿದರು.

ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಹೊಂದಿರುವ ಈ ಚಿತ್ರದಲ್ಲಿ ತಂದೆ-ಮಗನ ಕುರಿತಾದ ಕಥಾ ಹಂದರವಿದೆ. ಚಿತ್ರದಲ್ಲಿ ಬಸವ ಎಂಬ ಪಾತ್ರದಲ್ಲಿ ನಟನೆ ಮಾಡಿದ್ದೇನೆ. ಈ ಪಾತ್ರ ಹೋರಾಟದ ಬದುಕಾಗಿಯೇ ಪರಿಣಮಿಸುತ್ತದೆ. ಸಾಮಾನ್ಯ ಹುಡುಗನಾಗಿ ಅಸಾಮಾನ್ಯ ರೂಪಪಡೆದುಕೊಳ್ಳುವತ್ತ ಸಾಗುತ್ತದೆ. ಪ್ರಸ್ತುತ ದಿನಗಳಲ್ಲಿ ರೈತರ ಸಮಸ್ಯೆಗಳು ಮತ್ತು ಅದಕ್ಕೆ ಸ್ವಲ್ಪ ಮಟ್ಟಿನ ಪರಿಹಾರವನ್ನೂ ಸಹ ಕಾಣಬಹುದಾಗಿದೆ. ಇದರಲ್ಲಿ ಕೇವಲ ಬಸವನೊಬ್ಬನ ಕಥೆಯಲ್ಲ. ಚಿತ್ರ ನೋಡುಗರಿಗೆ ನನ್ನದೇ ಕಥೆ ಎಂಬಂತೆ ಭಾಸವಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಿತ್ರವನ್ನು ಶ್ರೆಕಾಂತ್ ಕಟಗಿ ನಿರ್ದೇಶಿಸಿದ್ದು, ಖಳನಟನಾಗಿ ರಾಹುಲ್ ಜೈನಾಪುರ್ ಮತ್ತು ನಾಯಕಿ ನಟಿಯಾಗಿ ಅರ್ಚನಾ ಜೋಯಿಷಿ ಅಭಿನಯಿಸಿದ್ದಾರೆ. ರವಿ ಬಸೂರು ಅವರ ಸಂಗೀತ ಮತ್ತು ಸಾಹಿತ್ಯ ಚಿತ್ರಕ್ಕಿದೆ. ನಾಲ್ಕು ಹಾಡುಗಳಿದ್ದು, ಈ ಪೈಕಿ ಒಂದು ಹಾಡು ಉತ್ತರ ಕರ್ನಾಟಕ ಭಾಷಾ ಶೈಲಿಯಲ್ಲೇ ಇದೆ. ಸ್ನೇಹಿತರ ತಂಡದ ಅಶ್ರುಲಾ ಕ್ರಿಯೇಷನ್ಸ್ ಮತ್ತು ಇಎಫ್‌ಜಿ ಸಂಸ್ಥೆಗಳು ಚಿತ್ರವನ್ನು ನಿರ್ಮಾಣ ಮಾಡಿವೆ ಎಂದರು.

ಇತ್ತೀಚಿನ ದಿನಗಳಲ್ಲಿ ಕೆಲ ಚಿತ್ರಗಳು ಚಿತ್ರಮಂದಿರಗಳಲ್ಲಿ 100 ದಿನಗಳ ಪ್ರದರ್ಶನ ಕಾಣುತ್ತವೆ. ಆದರೆ ಇನ್ನು ಕೆಲವು ಚಿತ್ರಗಳು ಒಟಿಟಿಯಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಆದರೆ ಒಟ್ಟಾರೆ ಪ್ರಸ್ತುತ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವಲ್ಲಿ ಎಲ್ಲ ಚಿತ್ರಗಳೂ ವಿಫಲವಾಗಿವೆ. ಅದಕ್ಕೆ ಚಿತ್ರೋದ್ಯಮವೇ ಕಾರಣ. ಮತ್ತೆ ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಹಳೆಯ ಪದ್ಧತಿ ಪುನರಾವರ್ತನೆಯಾಗುವ ಕಾಲ ಬರುತ್ತದೆ. ಅಲ್ಲಿಯವರೆಗೂ ಕಾಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಖಳನಟ ರಾಹುಲ್ ಜೈನಾಪುರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net