ಕ್ಷಯ ಕೊನೆಗೊಳಿಸಲು ಸಂಕಲ್ಪಮಾಡಿ

25 DVD 04
ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮ ನಿಮಿತ್ತ ಭಿತ್ತಿಪತ್ರದ ಮೂಲಕ ಜಾಗೃತಿ ಮೂಡಿಸಲಾಯಿತು. ಕ್ಷಯರೋಗ ಮೇಲ್ವಿಚಾರಕ ಮಹೇಶ, ಬಿಎಚ್‌ಇಒ ಗೀತಮ್ಮ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವೇಂದ್ರಪ್ಪ, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚೇತನ್, ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ಇತರರಿದ್ದರು.
Published on

ದೇವದುರ್ಗ: ಕ್ಷಯ ಮುಕ್ತ ಭಾರತ ನಿರ್ಮಾಣ ಉದ್ದೇಶದಿಂದ ರಾಷ್ಟ್ರೀಯ ಕ್ಷಯ ನಿರ್ಮೂಲನೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರ ಭಾಗವಾಗಿ ಪ್ರತಿ ಮಂಗಳವಾರ ಎಲ್ಲ ಕೇಂದ್ರಗಳಲ್ಲಿ ರೋಗಪತ್ತೆ ಮಾಡಲಾಗುವುದು ಎಂದು ಕ್ಷಯರೋಗ ಮೇಲ್ವಿಚಾರಕ ಮಹೇಶ ಹೇಳಿದರು.

ತಾಲೂಕಿನ ಜಾಲಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ಎಲ್ಲ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯ ಮುಖಾಂತರ ಸಕ್ರೀಯ ಕ್ಷಯರೋಗ ಪತ್ತೆಹಚ್ಚುವ ಅಭಿಯಾನ ನಡೆಸಲಾಗುವುದು. ಮನೆಮನೆ ಭೇಟಿ ನೀಡಿ ಸರ್ವೇ ಮಾಡಲಾಗುವುದು. ಕ್ಷಯರೋಗ ಮೈಕೋಬ್ಯಾಕ್ಟೀರಿಯ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ. ಸಾಂಕ್ರಾಮಿಕ ಖಾಯಿಲೆಯಾಗಿದ್ದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕ್ಷಯರೋಗಿ ಕೆಮ್ಮಿದಾಗ, ಸೀನಿದಾಗ ತುಂತುರು ಹನಿಗಳು ಗಾಳಿ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತವೆ. ರೋಗಿ ಚಿಕಿತ್ಸೆ ಪಡೆಯದಿದ್ದರೆ ವರ್ಷಕ್ಕೆ 10-15ಜನರಿಗೆ ಹರಡುತ್ತಾರೆ. 2025ರ ವೇಳೆಗೆ ಕ್ಷಯ ನಿರ್ಮೂಲನೆ ಮಾಡುವ ಗುರಿ ಹೊಂದಿರುವ ಕಾರಣ ನಾವೆಲ್ಲರೂ ಸೇರಿ ಕ್ಷಯವನ್ನು ಕೊನೆಗೊಳಿಸಲು ಸಂಕಲ್ಪತೊಡೋಣ ಎಂದರು.

ಬಿಎಚ್‌ಇಒ ಗೀತಮ್ಮ ಮಾತನಾಡಿ, ಎರಡು ವಾರಕ್ಕಿಂತಲೂ ಹೆಚ್ಚು ಕೆಮ್ಮು, ಕಫದಲ್ಲಿ ರಕ್ತ ಬೀಳುವುದು, ಕ್ರಮೇಣ ತೂಕ ಕಡಿಮೆ ಆಗುವುದು, ಸಂಜೆವೇಳೆ ಜ್ವರ ಬರುವುದು ರೋಗದ ಲಕ್ಷಣಗಳು. ಇಂಥ ಅನುಭವ ಕಂಡುಬಂದರೆ ತಡಮಾಡದೆ ಕಫ ಪರೀಕ್ಷೆ ಮಾಡಿಸಿ ಉಚಿತವಾಗಿ ಲಭ್ಯವಿರುವ ಚಿಕಿತ್ಸೆ ಪಡೆಯಬೇಕು. ಪೊಷಣೆ ಯೋಜನೆಯಡಿ ರೋಗಿಗಳು ಪ್ರತಿ ತಿಂಗಳು 500ರೂ. ಪೌಷ್ಟಿಕ ಆಹಾರ ಸೇವನೆಗೆ ಸಹಾಯ ಧನ ಪಡೆಯಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net