

ಮಡಿಕೇರಿ:
ಕ್ಷಯ ಮುಕ್ತ ಜಿಲ್ಲೆಯಾಗಿಸುವತ್ತ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕ್ಷಯ ರೋಗದ ಬಗ್ಗೆ ಅರಿವು ಕಾರ್ಯಾಗಾರ ಮಡಿಕೇರಿ ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆಯಿತು. ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ಕ್ಷಯ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಜನರು ಸಹಕಾರ ನೀಡುವಂತಾಗಬೇಕು ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ.ಜೋಶ ತೋಮಸ್ ಕಾರ್ಯಕ್ರಮದ ಬಗ್ಗೆ ಮಾತನಾಡಿ ಕ್ಷಯ ರೋಗ ನಿರ್ಮೂಲನೆಗಾಗಿ ಕೈಗೊಂಡ ಕ್ರಮಗಳನ್ನು ಪ್ರಶಂಸಿಸಿ ಕೊಡಗು ಜಿಲ್ಲೆಗೆ ಕಂಚಿನ ಪದಕ ಲಭಿಸುವಂತೆ ಕಾರ್ಯನಿರ್ವಹಿಸಿದ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕಚೇರಿ ಇದೀಗ 2025ರ ವೇಳೆಗೆ ಕ್ಷಯ ಮುಕ್ತ ಜಿಲ್ಲೆಯಾಗಿರುವ ಉದ್ದೇಶ ಹೊಂದಿದೆ.
ಕೊಡಗು ಜಿಲ್ಲೆ 2015ಕ್ಕೆ ಹೋಲಿಸಿದರೆ 2023ಕ್ಕೆ ಕ್ಷಯ ರೋಗದ ಪ್ರಕರಣಗಳಲ್ಲಿ ಶೇ.20ರಷ್ಟು ಕಡಿಮೆ ಆಗಿದೆ. ಆದ್ದರಿಂದ ಕ್ಷಯ ರೋಗ ನಿರ್ಮೂಲನೆಗೆ ಕೈಗೊಂಡ ಕ್ರಮಗಳನ್ನು ಮೆಚ್ಚಿ ಕೊಡಗು ಜಿಲ್ಲೆಗೆ ವಾರಾಣಾಸಿಯಲ್ಲಿ ನಡೆದ ರಾಷ್ಟçಮಟ್ಟದ ಕಾರ್ಯಕ್ರಮದಲ್ಲಿ ಕಂಚಿನ ಪದಕ ನೀಡಿ ಗೌರವಿಸಲಾಗಿದೆ. ಈಗ ಕ್ಷಯ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮಾತ್ರವಲ್ಲದೆ ಜನರಲ್ಲಿ ಅರಿವು ಮೂಡಿಸಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕ್ಷಯ ರೋಗ ನಿರ್ಮೂಲನೆ ಕುರಿತು ಜಿಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಸಮುದಾಯದಲ್ಲಿ ಕ್ಷಯ ರೋಗದ ಬಗ್ಗೆ ಇರುವ ಭಯ, ಆತಂಕ ನಿವಾರಣೆ ಮಾಡಲಾಗುತ್ತದೆ. ಜತೆಗೆ ಗ್ರಾಮ ಪಂಚಾಯಿತಿಯಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ಗುರಿ ಹೊಂದಿದ್ದು, ಶಂಕಿತ ಪ್ರಕರಣಗಳು ಶೀಘ್ರ ಪತ್ತೆ ಮಾಡಿ ತ್ವರಿತ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಜಿಲ್ಲೆಯಲ್ಲಿ ಕ್ಷಯರೋಗ ಪ್ರಕರಣಗಳು ಹೆಚ್ಚಾಗಿ ವರದಿಯಾದ ಸ್ಥಳಗಳಲ್ಲಿ ಜನಪದ ಬೀದಿ ನಾಟಕ ಕಲಾತಂಡಗಳ ಪ್ರದರ್ಶನ, ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳಲ್ಲಿ ಗೋಡೆ ಬರಹ ಮತ್ತು ಸಾರ್ವಜನಿಕ ಸ್ಥಳಗಳು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ರೇಡಿಯೋ ಜಿಂಗಲ್ಸ್ ಮುಖಾಂತರ ಜಾಗೃತಿ ಮೂಡಿಸಲಾಯಿತು ಎಂದರು.
ಪ್ರಮುಖರಾದ ಮಹದೇವಪ್ಪ, ಸಚಿನ್, ಮಂಜು, ನವೀನ್, ಶ್ರೀಧರ್ ಇತರರು ಇದ್ದರು.