ತಾಕತ್ತಿದ್ದರೆ ಕೋರ್ಟ್‌ನಲ್ಲಿ ಪ್ರಶ್ನಿಸಿ: ಡಿಕೆಶಿಗೆ ಈಶ್ವರಪ್ಪ ಸವಾಲು

kse
Published on

ಶಿವಮೊಗ್ಗ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ನನಗೆ ಕ್ಲೀನ್‌ಚಿಟ್ ಸಿಕ್ಕಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಾಕತ್ತಿದ್ದರೆ ಯಾವುದೇ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಿ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.

ಕಾಂಗ್ರೆಸ್‌ನವರಿಗೆ ಕಾನೂನಿನಲ್ಲಿ ಯಾವುದೇ ನಂಬಿಕೆಯಿಲ್ಲ. ಹೀಗಾಗಿ ನನಗೆ ಕ್ಲೀನ್‌ಚಿಟ್ ಸಿಕ್ಕಿರುವ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರು ಕೋರ್ಟ್‌ನಲ್ಲಿ ಪ್ರಶ್ನಿಸಲಿ. ಕೋರ್ಟ್ ತೀರ್ಪು ನನ್ನ ವಿರುದ್ಧ ಬಂದರೆ ಅವರು ಹೇಳಿದಂತೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮೇಲೆ ಇಡಿ ತನಿಖೆ ನಡೆದರೆ ಅದರ ವಿರುದ್ಧ ಪ್ರತಿಭಟನೆ ಮಾಡುವ ಕಾಂಗ್ರೆಸ್‌ನವರಿಗೆ ನನ್ನ ವಿರುದ್ಧ ಮಾತನಾಡುವ ನೈತಿಕತೆಯಿಲ್ಲ ಎಂದರು.

ಸಂತೋಷ್ ಪಾಟೀಲ್ ಆತ್ಮಹತ್ಯೆ ಸಂದರ್ಭದಲ್ಲಿ ವಾಟ್ಸಪ್‌ನಲ್ಲಿನ ಸಂದೇಶದಲ್ಲಿ ನನ್ನ ಹೆಸರು ಇದ್ದ ಮಾತ್ರಕ್ಕೆ ನಾನು ಅಪರಾಧಿಯಲ್ಲ ಎಂದು ಅನೇಕರು ಹೇಳಿದ್ದರು. ಸಿಎಂ, ಗೃಹ ಸಚಿವರಿಗೂ ಇದು ಸಂಚು ಎಂದು ವಿಶ್ವಾಸವಿತ್ತು. ನಾಳೆ ಯಾರಾದರೂ ಆತ್ಮಹತ್ಯೆ ಮಾಡಿಕೊಂಡು ಅದಕ್ಕೆ ಡಿ.ಕೆ.ಶಿವಕುಮಾರ್ ಕಾರಣ ಎಂದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಈಗ ಕಾಂಗ್ರೆಸ್‌ಗೆ ಅಸ್ತಿತ್ವವೇ ಉಳಿದಿಲ್ಲ. ದೇಶದಲ್ಲಿ ಅದು ನಿರ್ನಾಮವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್ ನಿರ್ನಾಮಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜಮೀರ್ ಅಹಮ್ಮದ್ ಮೂರೇ ಜನ ಸಾಕು ಎಂದು ಈಶ್ವರಪ್ಪ ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net