ಹುಬ್ಬಳ್ಳಿ: ಕೆಎಸ್ಸಿಎ ಇತ್ತೀಚೆಗೆ ನಡೆಸಿದ 19 ಮತ್ತು 23 ವಯೋಮಿತಿಯ ಧಾರವಾಡ ಜಿಲ್ಲಾ ಮಟ್ಟದ ಕ್ರಿಕೆಟ್ ಪಟುಗಳ ಆಯ್ಕೆ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಪಾಲಕರ ಮನವಿ ಪುರಸ್ಕರಿಸಿದ ಪ್ರಧಾನ ದಿವಾಣಿ ನ್ಯಾಯಾಲಯವು (ಕಿರಿಯ ವಿಭಾಗ) ಕೆಎಸ್ಸಿಎ ಧಾರವಾಡ ವಲಯ ಸಂಚಾಲಕ ನಿಖಿಲ್ ಭೂಸದಗೆ ಬುಧವಾರ ತುರ್ತು ನೋಟಿಸ್ ಜಾರಿ ಮಾಡಿ ಆದೇಶಿಸಿದೆ.
ಲಕ್ಷ್ಮಿಬಾಯಿ ರಾಘವೇಂದ್ರ ಶೆಲ್ಲೇದ ಎಂಬುವವರು ಸೇರಿ 6 ಜನ ಸಂತ್ರಸ್ತ ಪಾಲಕರು, ಧಾರವಾಡ ವಲಯದ 19 ಮತ್ತು 23 ವಯೋಮಿತಿಯ ಆಟಗಾರರ ಆಯ್ಕೆಯಲ್ಲಿ ನಿಯಮಾವಳಿಗಳನ್ನು ಮನಸೋ ಇಚ್ಛೆ ಗಾಳಿಗೆ ತೂರಲಾಗಿದೆ. ಈ ಮೂಲಕ ಸಂಚಾಲಕ ನಿಖಿಲ್ ಭೂಸದ ಅವರು ನೂರಾರು ಪ್ರತಿಭಾವಂತ ಕ್ರಿಕೆಟ್ ಪಟುಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿ, ನ್ಯಾಯಾಲಯದ ಮೊರೆ ಹೋಗಿದ್ದರು.
ಸಂತ್ರಸ್ತ ಪಾಲಕರ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಬಿ.ಎಸ್. ಅಸುಂಡಿ, ಕೆಎಸ್ಸಿಎ ಧಾರವಾಡ ಟಕದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಯಶಸ್ವಿಯಾದ ಹಿನ್ನೆಲೆಯಲ್ಲಿ ಅಜಿರ್ದಾರರ ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ನಿಖಿಲ್ ಭೂಸದ ಅವರಿಗೆ ನ್ಯಾಯಾಲಯಕ್ಕೆ ತುರ್ತು ಹಾಜರಾಗುವಂತೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಆ. 23ಕ್ಕೆ ಕಾಯ್ದಿರಿಸಿ ಆದೇಶ ನೀಡಿದ್ದಾರೆ.