ಕಥೆ ರಚನಾ ವಿಧಾನ ಕುರಿತು ಉಪನ್ಯಾಸ

28mdk03
Published on

ಮಡಿಕೇರಿ
ಮಡಿಕೇರಿಯಲ್ಲಿ ನಡೆದ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾ. ಡಿಸೋಜಾ ಹೆಸರಿನಲ್ಲಿ ಸ್ಥಾಪಿತವಾಗಿರುವ ನಾ. ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿನಿಧಿಯಂತೆ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕಥೆ ಬರೆಯುವ ಸ್ಪರ್ಧೆ ಮತ್ತು ಕತೆ ರಚನಾ ವಿಧಾನದ ಕುರಿತು ಉಪನ್ಯಾಸ ಕಾರ್ಯಕ್ರಮ ಮಡಿಕೇರಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಉಪ ನಿರ್ದೇಶಕ ಪುಟ್ಟರಾಜು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಿಗೆ ಕಥೆ ಬರೆಯಲು ವೇದಿಕೆ ಹಾಗೂ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ಮುಂದೆ ಉತ್ತಮ ಕಥೆಗಾರರು, ಸಾಹಿತಿಗಳು ಆಗಬೇಕೆಂದರು.
ಕತೆ ರಚನೆ ಕುರಿತು ಉಪನ್ಯಾಸ ನೀಡಿದ ಸಾಹಿತಿ ಸುನೀತಾ ಕುಶಾಲನಗರ ಮಾತನಾಡಿ ಕಥೆ ಬರೆಯಬೇಕೆಂದರೆ ಮೊದಲು ಮೂಲ ಹಾಗೂ ಅನುವಾದಿತ ಕಥೆಗಳನ್ನು ಓದಿಕೊಳ್ಳಬೇಕು. ಕಥೆ ಅನುಕರಣೆಯಾಗಬೇಕೆಂದಿಲ್ಲ ಮನಸ್ಸಿಗೆ ಮೂಡಿದ ವಿಷಯಗಳ ಕುರಿತು ಕಥೆ ಬರೆಯಬಹುದು. ಲೋಕ ಸಾಹಿತ್ಯದ ಕುರಿತು ತಿಳಿದುಕೊಂಡರೆ ಕಥೆ ಬರೆಯಲು ಅನುಕೂಲವಾಗುತ್ತದೆ. ಕಥೆ ಎಂದಿಗೂ ದೊಡ್ಡದಾಗಿರದೆ ಸಣ್ಣ ಕಥೆಗಳನ್ನು ಬರೆದರೆ ಆ ಬರಹ ಹೆಚ್ಚಿನ ಜನರನ್ನು ತಲುಪುತ್ತದೆ ಎಂದರು.
ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪಿ.ಆರ್. ವಿಜಯ ಮಾತನಾಡಿ ಕಥೆ ಬರೆಯಬೇಕೆಂದರೆ ಕಥೆಯನ್ನು ಓದುವ ಹಾಗೂ ಕೇಳುವ ಮನಸ್ಸಿರಬೇಕು. ಇಂದಿನ ಕಥಾ ಸ್ಪರ್ಧೆಗೆ ಆಗಮಿಸಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಮನಿಸಿದರೆ ಖಂಡಿತ ಮುಂದೊಂದು ದಿನ ಜಿಲ್ಲೆಯಲ್ಲಿ ಉತ್ತಮ ಕಥೆಗಾರು ರೂಪುಗೊಳ್ಳಬಹುದು ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧಿಕಾರಿ ಸಂಪತ್ ಕುಮಾರ್ ಮಾತನಾಡಿ ಕಥೆಯನ್ನು ಬರೆಯುವಾಗ ಜನಪದ ಭಾಷೆಯನ್ನು ಬಳಸಿಕೊಂಡರೆ ಜನರ ಮನಸ್ಸು ತಲುಪುತ್ತದೆ ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎಸ್. ಐ. ಮುನೀರ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರಿಷಿತ್ ಮಾದಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಮಂಜುನಾಥ್, ಕಾಲೇಜಿನ ಉಪನ್ಯಾಸಕರು, ಪೋಷಕರು, ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net