

ಬೆಳಗಾವಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದ ಘಟಕಗಳಲ್ಲಿ ದಲಿತ ಕಾರ್ಮಿಕರ ಮೇಲೆ ಮೇಲಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ನ್ಯಾಯ ಕೊಡಿಸಬೇಕಿದ್ದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಟೇಟ್ ಟ್ರಾನ್ಸಫೋರ್ಟ್ ಎಂಪ್ಲಾಯಿಜ ಯೂನಿಯನ್ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ರವಾನಿಸಲಾಯಿತು.
ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟಿಸಿದ ಯೂನಿಯನ್ ಪದಾಧಿಕಾರಿಗಳು, ಬೆಳಗಾವಿ ವಿಭಾಗದ 2ನೇ ಘಟಕದ ಕಾರ್ಮಿಕ ಬಿ.ಪಿ.ಪಮ್ಮಾರ ಅವರು, ಮೇ.15ರಂದು 79ರ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸಿದ್ದಲ್ಲದೇ, 2 ಗಂಟೆ ಹೆಚ್ಚುವರಿಯಾಗಿ ಕಾರ್ಯಾಗಾರದಲ್ಲಿ ಕೆಲಸ ಮಾಡಿದ್ದಾರೆ. ಆ ಬಳಿಕ ಕತ್ತು ನೋವಿನ ಕಾರಣ 15ರಂದು ಇದ್ದ ವಾರದ ರಜೆಯನ್ನು 16ಕ್ಕೆ ಪಡೆಯಲು ಮೌಖಿಕ ಸಮ್ಮತಿ ಪಡೆದು ರಜೆ ಮಾಡಿದ್ದರು. ಆದರೆ, ಮರುದಿನ ಕರ್ತವ್ಯಕ್ಕೆ ಹಾಜರಾದಾಗ ಸಿ/ಆಫ್ ಬದಲಾಗಿ ಎಲ್(ರಜೆ) ಎಂದು ನಮೂದಿಸಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಹತ್ತಾರು ಆರೋಪ ಮಾಡಿ ಅಮಾನತ್ತು ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದು ಯೂನಿಯನ್ ಗಮನಕ್ಕೆ ಬಂದ ತಕ್ಷಣವೇ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಹುಬ್ಬಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ, ಮಾಡಿ ಸಂಪೂರ್ಣ ಮಾಹಿತಿ ನೀಡಿದಾಗ, ಅಮಾನತ್ತು ಮಾಡಿರುವುದು ಸಮಂಜಸವಲ್ಲ. ಆಗಿರುವ ಅನ್ಯಾಯ ಸರಿಪಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಕೂಡಲೇ ಮುಖ್ಯಮಂತ್ರಿಗಳು ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯೂನಿಯನ್ ಅಧ್ಯಕ್ಷ ಎಸ್.ಆರ್.ಪಾಟೀಲ, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮನಿಯಾರ, ಗೌರವ ಅಧ್ಯಕ್ಷ ಎಸ್.ಎಸ್.ಪಾಟೀಲ, ಉಪಕಾರ್ಯದರ್ಶಿ ಎಂ.ಎಂ.ಪಟೇಲ, ಎಂ.ಎಚ್.ನದಾಫ್, ಸುರೇಂದ್ರ ಪಾಟೀಲ, ಎಚ್.ಎಂ.ಗೌಂಡಿ, ಎ.ಎಂ.ತಾಜರ್ ಸೇರಿದಂತೆ ಇತರರಿದ್ದರು.