ಕೆ.ಎಸ್.ನರಸಿಂಹಸ್ವಾಮಿ ಸಾಹಿತ್ಯ ಲೋಕದ ಬೆಳ್ಳಿಚುಕ್ಕಿ: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಬಣ್ಣನೆ

KS Narasimhaswamy Memorial Program mandya
Published on

ಮಂಡ್ಯ: ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಕನ್ನಡ ಸಾಹಿತ್ಯ ಲೋಕದ ಬೆಳ್ಳಿಚುಕ್ಕಿ ಎಂದು ಕೃಷಿಕ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಬಣ್ಣಿಸಿದರು.

ನಗರದ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಹಾಗೂ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಕೆ.ಎಸ್.ನರಸಿಂಹಸ್ವಾಮಿ ಅವರ 110ನೇ ಜನ್ಮದಿನಾಚರಣೆ, ಕೆಎಸ್‌ಎನ್ ಒಂದು ನೆನಪು-ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಎಸ್‌ನ ತಾವೆಂದೂ ದೊಡ್ಡ ಕವಿ ಎಂಬ ಬಿಗುಮಾನ ಹೊಂದಿರಲಿಲ್ಲ. ಬಡತನದಲ್ಲಿ ಹುಟ್ಟಿ, ಬಡತನದಲ್ಲೇ ಸಾವು ಕಂಡರೂ ಕಾವ್ಯ ಶ್ರೀಮಂತಿಕೆಯನ್ನು ಇಡೀ ಸಮುದಾಯಕ್ಕೆ ಉಣಬಡಿಸಿದ ಮಹಾನ್ ಕವಿ. ಕನ್ನಡ ಕಾವ್ಯ ಪರಂಪರೆಯಲ್ಲಿ ಅತಿ ಹೆಚ್ಚು ಮರುಮುದ್ರಣ ಕಂಡ ಮೈಸೂರು ಮಲ್ಲಿಗೆ ಕಾವ್ಯ ಸಂಕಲನ ಯುವಕರಿಗೆ ಬದುಕಿನ ಸಾರ ತಿಳಿಸುವ ಗ್ರಂಥವಾಗಿದೆ ಎಂದು ಹೇಳಿದರು.

ನರಸಿಂಹಸ್ವಾಮಿ ಅವರು ಒಂದು ಸರಳ ಬದುಕನ್ನ ನಡೆಸಿದವರು. ಒಂದೂವರೆ ಚದರಡಿಯಲ್ಲಿ ತಮ್ಮ ದಾಂಪತ್ಯ ಜೀವನ ನಡೆಸಿದ ದೊಡ್ಡ ಕವಿ. ನಾನು ಪ್ರೇಮಕವಿ ಅಲ್ಲ, ದಾಂಪತ್ಯ ಕವಿ ಎಂದು ಹೃದಯದಿಂದ ಹೇಳಿದ್ದಾರೆ. ಅವರ ಕವಿತೆಗಳನ್ನು ಕೇಳಿದರೆ ಜೀವನೋತ್ಸಾಹ ಬರುತ್ತದೆ. ಅವರಿಗೆ ಬಹಳಷ್ಟು ಪ್ರಶಸ್ತಿಗಳು ಲಭಿಸಿವೆ. ಕೆಎಸ್‌ನ ಹೆಸರಿನಲ್ಲಿ ಒಂದು ಟ್ರಸ್ಟ್ ರಚನೆ ಮಾಡಿದ್ದಾರೆ. ಸರ್ಕಾರದಿಂದ ಅನುದಾನ ಬರುತ್ತದೆ. ಆದರೆ ಅದು ಬೆಂಗಳೂರಿಗೆ ಸೀಮಿತವಾಗಿದೆ. ಆದ್ದರಿಂದ ಸಕ್ರಿಯವಾಗಿರುವವರನ್ನು ಟ್ರಸ್ಟ್ ಸದಸ್ಯರನ್ನಾಗಿ ನೇಮಿಸುವ ಮೂಲಕ ಮಂಡ್ಯಕ್ಕೂ ವಿಸ್ತರಿಸಿ ಅವರ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಈ ಮೂಲಕ ಟ್ರಸ್ಟ್ ಜೀವಂತವಾಗಿ ಇಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಇನ್ನರ್ ವ್ಹೀಲ್ ಕ್ಲಬ್ ಶಾಂತಾ ಮಂಜುನಾಥ್, ವಕೀಲೆ ಪ್ರಣೀತಾ, ಶಿಕ್ಷಕಿ ಸಿಂಚನಾ, ಕೃಷ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net