ಒಟ್ಟು ಸಮುದಾಯದ ದನಿಯಾಗಿದ್ದ ಕೆಎಸ್‌ನ: ಹಿರಿಯ ವಿಮರ್ಶಕ ರಾಘವೇಂದ್ರರಾವ್ ಅಭಿಮತ

KS Narasimhaswamy Kavyakammata Mandya
Published on

ಮಂಡ್ಯ: ಕವಿತೆಯ ವಿಶಿಷ್ಟತೆ ಮೆರೆಯುವುದರ ಬದಲು ಒಟ್ಟು ಸಮುದಾಯದ ದನಿಯಾಗಬೇಕು ಎಂದುಕೊಂಡ ಕೆಲವೇ ಕವಿಗಳಲ್ಲಿ ಕೆ.ಎಸ್.ನರಸಿಂಹಸ್ವಾಮಿ ಒಬ್ಬರು ಎಂದು ಹಿರಿಯ ವಿಮರ್ಶಕ, ಕಮ್ಮಟದ ನಿರ್ದೇಶಕ ಡಾ.ಎಚ್.ಎಸ್.ರಾಘವೇಂದ್ರರಾವ್ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಕೆ.ಎಸ್.ನರಸಿಂಹಸ್ವಾಮಿ ಕಾವ್ಯಕಮ್ಮಟದಲ್ಲಿ ಮಾತನಾಡಿದ ಅವರು, ಕೆ.ಎಸ್.ನರಸಿಂಹಸ್ವಾಮಿ ಅವರು ನನ್ನ ಕನ್ನಡಿಯಲ್ಲಿ ನಾನು ಕಾಣಲೇ ಇಲ್ಲ. ಏಕೆಂದರೆ ಕನ್ನಡಿಯೂ ನನ್ನದಲ್ಲ ಕವಿತೆಯೂ ನನ್ನದಲ್ಲ ಎಂದಿದ್ದಾರೆ. ಇದು ಕವಿಯ ಒಂದು ದೃಷ್ಟಿಕೋನ. ಅದೇ ರೀತಿ ಹಾಡು ಬರೆಯುವವನದಲ್ಲ, ಹೇಳುವವನದು. ಕೇಳುವವನದು ಎಂದರು.

21ನೇ ಶತಮಾನದ ಮೊದಲಲ್ಲಿ ಸಿದ್ದಲಿಂಗಯ್ಯ ಅವರು ನನ್ನ ಜನಗಳು ಎಂದು ಬರೆದಾಗ ಅವರ ಕವಿತೆಗಳಲ್ಲಿ ಯಾವ ಆಶಯವನ್ನು ವ್ಯಕ್ತಪಡಿಸಿದರೋ, ಅದನ್ನು ಕನ್ನಡ ಕವಿಗಳು ಕಾಲಕಾಲಕ್ಕೆ ಹೇಗೆ ಹೇಳುತ್ತಾ ಬಂದರು. ಯಾವ ಭಾಷೆಯಲ್ಲಿ ವ್ಯಕ್ತಪಡಿಸಿದರು ಎಂಬುದನ್ನು ಗಮನಿಸಬೇಕು. ಮೈಸೂರು ಮಲ್ಲಿಗೆಯನ್ನು ಬರೆದ ಕವಿ ಮೈಸೂರು ಮಲ್ಲಿಗೆಯನ್ನು ಅದರಂತೆ ’ಶಿಲಾಲತೆ’, ’ತೆರೆದ ಬಾಗಿಲು’, ’ಎದೆ ತುಂಬ ನಕ್ಷತ್ರ’ ವನ್ನು ಮೀರಿ ಬರೆಯುತ್ತಾ ಬಂದವರು. ಲಂಕೇಶರ ಕಥೆಗಳ ಹಾಗೆ. ಇದು ಸಕ್ಕರೆ ನೀರಿನಲ್ಲಿ ಕರಗಿ ಹೋಗುವ ಹಾಗೆ ಕವಿಯೊಬ್ಬ ಜನಮನದಲ್ಲಿ ಕರಗಿಹೋಗುವ ರೀತಿಯಾಗಿ ಕಾಣುತ್ತದೆ ಎಂದು ಹೇಳಿದರು.

ಈಗ ಬರೆದಿದ್ದನ್ನು ಓದು ಎಂದು ಹೇಳುವ ಕಾಲದಲ್ಲಿ ಹಳೆಯ ಕಥೆ, ಕಾದಂಬರಿ, ಕವಿತೆ ನಾವು ಏಕೆ ಓದಬೇಕು ಎಂಬುದು ನಮ್ಮ ಕಾಲದ ಓದುಗರಿಗೆ ಇರುವ ಒಂದು ದೊಡ್ಡ ಸವಾಲು. ನನ್ನದೇ ಭಾವನೆ, ವಿಚಾರ, ನಿಲುವು ಭಾಷೆ ಎಲ್ಲವೂ ಇರುವಾಗ ಹಳೆಯದನ್ನು ಏಕೆ ಓದಬೇಕು ಕೇಳಿಸಿಕೊಳ್ಳಬೇಕು. ಇದು ಇಲ್ಲಿರುವ ಕವಿಗಳಿಗೂ ಮುಖ್ಯ. ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಸಾಮಾನ್ಯರಿಗೂ ಮುಖ್ಯ. ಕವಿಗಳು ಓದುಗರು ಎಲ್ಲರೂ ಸಾಮಾನ್ಯ ಮನುಷ್ಯರಾಗಿದ್ದೇವೆ. ಹಳೆಯದ್ದನ್ನು ಏಕೆ ಓದಬೇಕು ಎಂದುಕೊಂಡರೆ ಸಂಗೀತಗಾರ ಬೇರೆಯವರ ಸಂಗೀತವನ್ನು ಕೇಳುವುದಿಲ್ಲ. ನೃತ್ಯಗಾರ ಬೇರೆಯವರ ನೃತ್ಯ ನೋಡುವುದಿಲ್ಲ ಎಂದುಕೊಂಡಂತಾಗುತ್ತದೆ. ನರಸಿಂಹಸ್ವಾಮಿ ಅವರ ಕಮ್ಮಟ ಇದಕ್ಕೆ ಮಾದರಿ ಎಂದರು.

ಹಿರಿಯ ಕವಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಮಹಾರಾಣಿ ಕ್ಲಸ್ಟರ್ ವಿವಿಯ ಕನ್ನಡ ಪ್ರಾಧ್ಯಾಪಕ ಡಾ.ಕೆ.ವೈ.ನಾರಾಯಣಸ್ವಾಮಿ, ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಡಿ.ಡೊಮಿನಿಕ್, ಚನ್ನಪಟ್ಟಣದ ಕನ್ನಡ ಪ್ರಾಧ್ಯಾಪಕ ಡಾ.ದೇವರಾಜು ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್.ಸುಜಾತಾ, ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಇದ್ದರು. ಕಮ್ಮಟದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಕವಿತೆಗಳ ಬಗ್ಗೆ ವಿಚಾರ ವಿನಿಮಯ, ಸಂವಾದ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net