ಎಚ್​ಡಿಕೆ ಅಲ್ಲ ಸಿಡಿಕೆ ಅವರು, 35 ನಕಲಿ ಸಿಡಿಗಳನ್ನು ಬಿಡುಗಡೆ ಮಾಡಿರುವ ಅವರನ್ನು ಜನ ನಂಬರು: ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್​

KS ESHWARAPPA
Published on

ಬೆಂಗಳೂರು: ಅವರು ಎಚ್​ಡಿಕೆ ಅಲ್ಲ, ಸಿಡಿಕೆ. ಸಿಡಿಕೆಯವರು ನಕಲಿ ಸಿಡಿ ಬಿಡುಗಡೆ ಮಾಡಿದ್ದಾರೆ. 35 ನಕಲಿ ಸಿಡಿಗಳನ್ನು ಬಿಡುಗಡೆ ಮಾಡಿದ್ದಾರೆ. ಅದನ್ನು ರಾಜ್ಯದ ಜನರು ಯಾರೂ ನಂಬಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಷ್ಟ್ರದ್ರೋಹಿ ಸಂಘಟನೆಗಳಿಗೆ ಎಚ್​ಡಿಕೆ ಬೆಂಬಲ ಕೊಡ್ತಿದ್ದಾರೆ. ಇಡೀ ರಾಜ್ಯ ಅವರಿಗೆ ಛೀಮಾರಿ ಹಾಕುತ್ತಿದೆ ಎಂದು ಹೇಳಿದರು.

ಸಿಸಿಟಿವಿ ಹಾಳುಮಾಡಿದ ವಿಡಿಯೋ ಅವರಿಗೆ ಸಿಗಲಿಲ್ಲವೇ ಎಂದು ಪ್ರಶ್ನಿಸಿದ ಈಶ್ವರಪ್ಪ, ನೀವು ಇನ್ನು 10 ಜನ್ಮ ಎತ್ತಿ ಬಂದರೂ ಸಿಎಂ ಆಗುವುದು ಸಾಧ್ಯವಿಲ್ಲ. ರಾಜ್ಯ ಶಾಂತವಾಗಿ ಇರಲು ಬಿಡಿ. ನೀವು ಸಿಎಂ ಆಗಿದ್ದಾಗ ಇದ್ದ ಪೊಲೀಸರೇ ತಾನೆ ಅವರು. ಅವರ ಜೀವ ಅವರು ಉಳಿಸಿಕೊಳ್ಳುವುದು ಬೇಡವೇ? ಎಂದು ಪ್ರಶ್ನಿಸಿದರು.

ಮದ್ದೂರು ತಾಲೂಕಿನ ತೋಪಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಕೊಲೆ ಆಯ್ತು. ಆಗ ಎನ್ ಕೌಂಟರ್ ಮಾಡಿ ಬಿಸಾಕಿ ಎಲ್ಲರನ್ನೂ ಅಂತ ಹೇಳಿದ್ರು. ಹೀಗೆ ಹೇಳಿದವರು ನರೇಂದ್ರ ಮೋದಿಯವರನ್ನು ಹಿಟ್ಲರ್ ಗೆ ಹೋಲಿಸುತ್ತಾರೆ. ಗೋಲಿ ಆಟ ಆಡೋ ಮಕ್ಕಳೂ ಕೂಡ ಹೆಚ್ ಡಿಕೆ ಮಾತು ನಂಬಲ್ಲ. ಸಿದ್ದರಾಮಯ್ಯ ಹಾಗೂ ಹೆಚ್ ಡಿಕೆಗೆ ರಾಜ್ಯ ತಣ್ಣಗೆ ಇರೋದು ಇಷ್ಟವಿಲ್ಲ. ಕುಮಾರಸ್ವಾಮಿಯವರಿಗೆ ಹಗಲು ಹೊತ್ತಲ್ಲೂ ಸಿಎಂ ಕುರ್ಚಿಯ ಮೇಲೆಯೇ ಕಣ್ಣು ಎಂದು ವ್ಯಂಗ್ಯವಾಡಿದರು.

ಅಪ್ಪ, ಮಗ ಇಬ್ಬರೂ ಸೋತಿದ್ದಾರೆ, ಬೈ ಎಲೆಕ್ಷನ್ ನಲ್ಲೂ ಸೋತಿದ್ದಾರೆ. ಮೊದಲು ನಿಮ್ಮ ಪಕ್ಷವನ್ನು ಮೊದಲು ಉಳಿಸಿಕೊಳ್ಳಿ. ಗೋ ಹತ್ಯೆ ಮಾಡುವವರನ್ನು ಉಳಿಸಿಕೊಳ್ಳೋಕೆ ಹೋಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಅಶಾಂತಿ ಉಂಟು ಮಾಡಿ ಉದ್ರೇಕಕಾರಿ ಕೆಲಸಗಳನ್ನ ಮಾಡಿ ಹೀರೋ ಆಗೋಕೆ ಹೋದ್ರೆ ಜೀರೋ ಆಗ್ತೀರಿ. ಮಂಗಳೂರು ಅಂಗಡಿಗಳಿಗೆ ನುಗ್ಗಿ ಧ್ವಂಸ ಮಾಡಿದ್ರು. ಅಂತಹವರನ್ನ ಖಂಡನೆ ಮಾಡೋದನ್ನ ಬಿಟ್ಟು ಅವ್ರಿಗೆ ಸಪೋರ್ಟ್ ಮಾಡ್ತೀರಿ. ಯಾವುದೇ ಕಾರಣಕ್ಕೂ ರಾಜ್ಯದ ಜನ ನಿಮ್ಮನ್ನ ಕ್ಷಮಿಸಲ್ಲ ಎಂದು ಈಶ್ವರಪ್ಪ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net