

ಬೆಳಗಾವಿ: ರೈತರ ಹೋರಾಟಕ್ಕೆ ಮಣಿದು ಪ್ರತಿ ಟನ್ ಕಬ್ಬಿಗೆ 3300ರೂ. ದರ ನಿಗದಿ ಮಾಡಿರುವುದನ್ನು ಸ್ವಾಗತಿಸಿ ನಗರದ ಚನ್ನಮ್ಮ ವೃತ್ತದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಈಚೆಗೆ ಸುವರ್ಣ ವಿಧಾನ ಸೌಧ ಎದುರು ಪುಣೆ-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟಿಸಿದ್ದ ಕರವೇ ಕಾರ್ಯಕರ್ತರು, ರೈತರ ಹೋರಾಟವನ್ನು ಬೆಂಬಲಿಸಿದ್ದರು. ಈಗ ಬೇಡಿಕೆ ಈಡೇರಿದ ಹಿನ್ನೆಲೆ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಕಬ್ಬು ಬೆಳೆಗಾರರಿಗೆ ನ್ಯಾಯಯುತವಾದ ದರ ಕೊಡಿಸುವ ಹೋರಾಟದಲ್ಲೂ ನಮ್ಮ ಸಂಘಟನೆ ಭಾಗಿಯಾಗಿದೆ. ಶೇ 11.25 ರಿಕವರಿ ಹೊಂದಿದ ಕಬ್ಬಿಗೆ ಮಾತ್ರ 3,300ರೂ. ದರ ನೀಡಿದರೆ ಸಾಲದು. ಅದಕ್ಕಿಂತ ಕಡಿಮೆ ರಿಕವರಿ ಇದ್ದರೂ, ಟನ್‌ಗೆ 3,300 ಕೊಡಲೇಬೇಕು. ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ತೂಕದಲ್ಲಿ ರೈತರಿಗೆ ಮೋಸವಾಗುವುದನ್ನು ಸರ್ಕಾರ ತಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಂಚಾಲಕ ಸುರೇಶ ಗವನ್ನವರ, ಗಣೇಶ ರೋಕಡೆ, ಹೊಳೆಪ್ಪ ಸುಲಧಾಳ, ಸತೀಶ ಗುಡದವರ, ರಮೇಶ ಯರಗನ್ನವರ, ವಿನಾಯಕ ಹಟ್ಟಿಹೊಳಿ, ಕರಣ ಚವ್ಹಾಣ, ವಿನಾಯಕ ಭೋವಿ, ಸಂಪತ ಸಕ್ರೆನ್ನವರ ಇತರರಿದ್ದರು.