ಕರವೇಯಿಂದ ಕನ್ನಡ ದೀಕ್ಷೆ ಕಾರ್ಯಕ್ರಮ

12dvk 8
Published on

ಬೆಳಗಾವಿ: ಕರ್ನಾಟಕದಲ್ಲಿರುವವರು ತಮ್ಮನ್ನು ‘ನೀನು ಯಾರು?’ ಎಂದು ಯಾರಾದರೂ ಕೇಳಿದಾಗ ಮೊದಲು ಕನ್ನಡಿಗ ಎಂದು ಹೇಳಿಕೊಳ್ಳಿ. ಆ ಬಳಿಕ ನಿಮ್ಮ ಇತರೆ ಹಿನ್ನೆಲೆ, ಗುರುತು ಹೇಳಿಕೊಳ್ಳಬೇಕು. ಇಂತಹ ಒಂದು ಬದ್ಧತೆ ಕನ್ನಡಿಗರಲ್ಲಿ ಬರಬೇಕಿದೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ಕನ್ನಡ ದೀಕ್ಷೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಠಾಧೀಶರಾದರೂ ಕನ್ನಡಕ್ಕಾಗಿ ಸಮರ್ಪಿಸಿಕೊಂಡಿದ್ದೇವೆ. ಕನ್ನಡ ಸೇವೆಗಾಗಿ ನಾವು ಸದಾ ಸಿದ್ಧವಾಗಿದ್ದೇವೆ. ಮೊದಲು ಕನ್ನಡ, ಬಳಿಕ ಉಳಿದೆಲ್ಲವೂ ಎಂದು ಹೇಳುವ ಸ್ವಾಮೀಜಿಗಳಾಗಿದ್ದೇವೆ. ಹೀಗೆ ಎಲ್ಲ ಕನ್ನಡಿಗರು ಭಾಷೆಗಾಗಿ ಕಟಿಬದ್ಧರಾಗಿರಬೇಕು ಎಂದು ಆಶೀರ್ವಚನ ನೀಡಿದರು.

ಅಥಣಿ ಮೋಟಗಿಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಕನ್ನಡಿಗರು ಹುಲಿಗಳಾಗಿ ಬದುಕಬೇಕು. ಕುರಿಗಳಂತೆ ಅಲ್ಲ. ಮೂರೇ ದಿನ ಬದುಕಲಿ ಆದರೆ ಕನ್ನಡದ ಹುಲಿಗಳಾಗಿ ಘರ್ಜಿಸಬೇಕು. ಅಭಿಮಾನ, ಹೆಮ್ಮೆ, ಗರ್ವ ಕನ್ನಡದ ಪರಂಪರೆಯಲ್ಲಿ ಬಂದಿದೆ. ಈ ಪರಂಪರೆಯನ್ನು ಎಂದಿಗೂ ಮರೆಯಬಾರದು. ಭಾರತ ಸಂಕ್ಷಿಪ್ತ ಬ್ರಹ್ಮಾಂಡವಾದರೆ, ಕರ್ನಾಟಕ ಸಂಕ್ಷಿಪ್ತ ಭಾರತವಿದ್ದಂತೆ. ಕನ್ನಡದ ಸಂಸ್ಕೃತಿ, ವಚನ, ನಾಡಿನ ಸೊಬಗು ಅನನ್ಯ. ಇದನ್ನು ಅರಿತುಕೊಂಡು ನಾವೆಲ್ಲ ಕೆಚ್ಚದೆಯ ಕನ್ನಡಿಗರಾಗಿ ಬಾಳಬೇಕು ಎಂದರು.

ಸಮಾರಂಭದಲ್ಲಿ 2500ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಕನ್ನಡ ದೀಕ್ಷೆ ನೀಡಲಾಯಿತು. ಕಾಂಗ್ರೆಸ್ ಯುವ ಮುಖಂಡ ರಾಹುಲ ಜಾರಕಿಹೊಳಿ, ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ, ಕಾರ್ಯದರ್ಶಿ ಸಣ್ಣವೀರಪ್ಪಗೌಡ, ರಾಜ್ಯ ಸಂಚಾಲಕ ಸುರೇಶ ಗವನ್ನವರ, ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಸಹನಾ ಶೇಖರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net